ದೇಶ

ಗೋವಾ: ಬಿಜೆಪಿಗೆ ಆಡಳಿತ ವಿರೋಧಿ ಅಲೆ ನಡುವೆಯೂ ಕಾಂಗ್ರೆಸ್ ಗೆ ಗೆಲುವಿನ ಹಾದಿ ಸುಗಮವಲ್ಲ!

Srinivas Rao BV

ಪಣಜಿ: 2022 ರ ಪ್ರಾರಂಭದಲ್ಲಿ ಗೋವಾ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಜನಪ್ರಿಯ ನಾಯಕ ಮನೋಹರ್ ಪರಿಕ್ಕರ್ ಅವರಿಲ್ಲದೇ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. 

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಸಮಸ್ಯೆ ಇದ್ದರೂ ವಿಪಕ್ಷ ಕಾಂಗ್ರೆಸ್ ನ ಗೆಲುವಿನ ಹಾದಿ ಸುಗಮವಾಗಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಈ ಸಣ್ಣ ರಾಜ್ಯದಲ್ಲಿ ಹಲವಾರು ಅಂಶಗಳು ಕೆಲಸ ಮಾಡುತ್ತಿದ್ದು, ಕೋವಿಡ್-19 ನ ಕೆಟ್ಟ ನಿರ್ವಹಣೆ ಹಾಗೂ ಇನ್ನಿತರ ವಿಷಯಗಳು ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. 

ಗೋವಾ ಕಾಂಗ್ರೆಸ್ ನಲ್ಲಿ ಕರ್ನಾಟಕದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಂಎಲ್ ಸಿ ಪ್ರಕಾಶ್ ರಾಥೋಡ್, ಉತ್ತರ ಗೋವಾದಲ್ಲಿ ಮನ್ಸೂರ್ ಅಲಿ, ಸುನಿಲ್ ಹೆಚ್ (ದಕ್ಷಿಣ ಗೋವಾ)ಗಳಲ್ಲಿ ಪಕ್ಷದ ರಣತಂತ್ರ ಹೆಣೆಯಲು ತಿಂಗಳುಗಳ ಕಾಲ ರಾಜ್ಯದಲ್ಲಿ ಬಿಡುಬಿಟ್ಟಿದ್ದರು. ಈ ಅವಧಿಯ ಅಧ್ಯಯನದ ಒಂದು ಸಾಲಿನ ಸಾರಾಂಶವೆಂದರೆ ಅದು " ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಗೆ ಸುಲಭದ ತುತ್ತಲ್ಲ" ಎಂಬುದಾಗಿದೆ. 

ಕಾಂಗ್ರೆಸ್ ಗೆ ಇರುವ ಕೊರತೆ ಎಂದರೆ ಅದು ಸಕ್ರಿಯ ವಿಪಕ್ಷವಾಗಿಲ್ಲ ಹಾಗೂ ಪಕ್ಷದಲ್ಲಿನ ಆಂತರಿಕ ಒಡಕು ಎನ್ನುವುದಾಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ನಗರಸಭೆ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ನದ್ದು ಕಳಪೆ ಪ್ರದರ್ಶನ. ಹಲವು ಮಂದಿ ಕಾಂಗ್ರೆಸ್ ನಾಯಕರು, ಮಾಜಿ ಕಾಂಗ್ರೆಸ್ ನಾಯಕ ವಿಜಯ್ ಸರ್ದೇಸಾಯಿ ಸ್ಥಾಪಿಸಿದ್ದ ಗೋವಾ ಫಾರ್ವರ್ಡ್ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ಮಾತನ್ನಾಡಿದ್ದಾರೆ. 

ಚುನಾವಣೆ ಸನಿಹದಲ್ಲೇ ಇದ್ದರೂ ಕಾಂಗ್ರೆಸ್ ತನ್ನ ವ್ಯವಸ್ಥೆಯನ್ನು ಪುನಾರಚನೆ ಮಾಡಿಕೊಳ್ಳಲು ತನ್ನದೇ ಸಮಯ ತೆಗೆದುಕೊಳ್ಳುತ್ತಿದೆ. "ನಾವು 18 ತಿಂಗಳಿನಿಂದ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಯತ್ನಿಸುತ್ತಿದ್ದೇವೆ ಮಾತಾಡಲು ಮುಂದಾಗುತ್ತಿದ್ದೇವೆ, ಮೈತ್ರಿ ಇಲ್ಲದೇ ಇದ್ದರೆ ಸೆಕ್ಯುಲರ್ ಮತಗಳು ಒಡೆಯುತ್ತವೆ, ಕಾಂಗ್ರೆಸ್ ತೆಕ್ಕೆಯಿಂದ 13 ನಗರಸಭೆ ಕೌನ್ಸಿಲ್ ಗಳು ಕೈತಪ್ಪಿವೆ" ಎನ್ನುತ್ತಾರೆ ವಿಜಯ್ ಸರ್ದೇಸಾಯಿ.

"ಮೈತ್ರಿಗೆ ಮುಂದಾಗಬೇಕೋ ಬೇಡವೋ ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಲಿದೆ. ಬಿಜೆಪಿ ನಮ್ಮ 13 ಶಾಸಕರನ್ನು ಹೈಜಾಕ್ ಮಾಡಿದೆ" ಎಂದು ಪ್ರಕಾಶ್ ರಾಥೋಡ್ ಹೇಳಿದ್ದಾರೆ. ಚುನಾವಣೆ ಸನಿಹದಲ್ಲೇ ಇದ್ದರೂ ಸಣ್ಣ ಕರಾವಳಿ ಭಾಗದ ರಾಜ್ಯ ತನ್ನ ಒಲವು ಯಾರತ್ತ ಇದೆ ಎಂಬ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.

SCROLL FOR NEXT