ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಇಡಿ ವಿಚಾರಣೆಗೆ ಹಾಜರು

Shilpa D

ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. 

ಕೇಂದ್ರ ದೆಹಲಿಯಲ್ಲಿರುವ ಜಾಮ್‌ ನಗರ್‌ ಹೌಸ್‌ನಲ್ಲಿರುವ ಕೇಂದ್ರೀಯ ತನಿಖಾ ಸಂಸ್ಥೆಯ ಕಚೇರಿಗೆ ಆಗಮಿಸಿದ ಅಭಿಷೇಕ್ ಬ್ಯಾನರ್ಜಿ, ‘ತನಿಖೆ ಎದುರಿಸಲು ಸಿದ್ಧನಿದ್ದೇನೆ. ಈ ಸಂಬಂಧ ತನಿಖಾ ಸಂಸ್ಥೆಗೆ ಸಹಕಾರ ನೀಡುತ್ತೇನೆ‘ ಎಂದು ಹೇಳಿದರು. 

ಪ್ರಕರಣದ ತನಿಖಾಧಿಕಾರಿಗಳು ವಿಚಾರಣೆ ವೇಳೆ ‘ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್‌ಎ)ಯಡಿ ಅಭಿಷೇಕ್‌ ಬ್ಯಾನರ್ಜಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬ್ಯಾನರ್ಜಿ, ‘ಕೇಂದ್ರದ ಯಾವುದೇ ತನಿಖಾ ಸಂಸ್ಥೆ, ನಾನು ಅಕ್ರಮ ವಹಿವಾಟಿನಲ್ಲಿ ಪಾಲ್ಗೊಂಡಿರುವುದನ್ನು ಸಾಬೀತುಪಡಿಸಿದರೆ, ನಾನೇ ನೇಣು ಬಿಗಿದುಕೊಳ್ಳುತ್ತೇನೆ‘ ಹೇಳಿದ್ದರು.

ಅಭಿಷೇಕ್ ಬ್ಯಾನರ್ಜಿ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ತೃಣಮೂಲ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಭಿಷೇಕ್ ಬ್ಯಾನರ್ಜಿ ಲೋಕಸಭೆಯಲ್ಲಿ ಡೈಮಂಡ್ ಹಾರ್ಬರ್ ಸ್ಥಾನವನ್ನು ಪ್ರತಿನಿಧಿಸುತ್ತಾರೆ.

ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಸೆಪ್ಟೆಂಬರ್ 6 ರಂದು ದೆಹಲಿಯಲ್ಲಿ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಬ್ಯಾನರ್ಜಿಗೆ ಇಡಿ ಸಮನ್ಸ್ ನೀಡಿತ್ತು.

SCROLL FOR NEXT