ದೇಶ

ನಿತಿನ್ ಪಟೇಲ್, ಮನ್ಸುಖ್ ಮಾಂಡವೀಯ, ಆರ್.ಸಿ.ಫಾಲ್ಡು ಗುಜರಾತ್ ನ ನೂತನ ಸಿಎಂ ಯಾರು?

Srinivas Rao BV

ಅಹ್ಮದಾಬಾದ್: ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್ ಸಿಎಂ ವಿಜಯ್ ರುಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನೂತನ ಸಿಎಂ ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.

ಗುಜರಾತ್ ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ರಾಜ್ಯ ಕೃಷಿ ಸಚಿವ ಆರ್ ಸಿ ಫಾಲ್ಡು, ಕೇಂದ್ರ ಸಚಿವರಾದ ಪುರುಷೋತ್ತಮ್ ರೂಪಾಲ, ಮನ್ಸುಖ್ ಮಾಂಡವೀಯ ಅವರ ಹೆಸರುಗಳು ನೂತನ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ.

ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದ್ದು, ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ಯಾವುದೇ ಕಾರಣವನ್ನೂ ತಿಳಿಸದೇ ಸಿಎಂ ಬದಲಾವಣೆಗೆ ಮುಂದಾಗಿದೆ.

"ಮುಂದಿನ ಸಿಎಂ ರೇಸ್ ನಲ್ಲಿ ಪಟೇಲ್, ಫಾಲ್ಡು, ರೂಪಾಲ, ಮಾಂಡವೀಯ ಹೆಸರುಗಳಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದನ್ನು ನಿರ್ಧರಿಸುವುದರಿಂದ ಹೆಸರನ್ನು ಬೇರೆಯವರು ಊಹಿಸುವುದು ಕಷ್ಟ ಸಾಧ್ಯ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

2016 ರಲ್ಲಿ ಆನಂದಿ ಬೆನ್ ಪಟೇಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ನಿತಿನ್ ಪಟೇಲ್ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ರುಪಾನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು.

ರುಪಾನಿ ರಾಜೀನಾಮೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಿತಿನ್ ಪಟೇಲ್ ಅವರನ್ನೇ ಸಿಎಂ ಮಾಡಬೇಕೆಂಬ ಆಗ್ರಹ ಎದುರಾಗಿದೆ.

ಇನ್ನು ಗುಜರಾತ್ ನಲ್ಲಿ ಪಟೇಲ್ ನಂತೆಯೇ ಪ್ರಬಲ ಸಮುದಾಯವಾಗಿರುವ ಪಾಟೀದಾರ್ ಸಮುದಾಯಕ್ಕೆ ಸೇರಿರುವ ನಾಯಕರಾಗಿರುವುದರಿಂದ ಸಿಎಂ ರೇಸ್ ನಲ್ಲಿ ಮಾಂಡವೀಯ ಮುಂಚೂಣಿಯಲ್ಲಿದ್ದಾರೆ.

ಪಾಟೀದಾರ್ ಸಮುದಾಯದವರು ತಮ್ಮ ಸಮುದಾಯದವರೇ ಮುಖ್ಯಮಂತ್ರಿಯಾಗಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸಿಆರ್ ಪಾಟಿಲ್ ಮಹಾರಾಷ್ಟ್ರ ಮೂಲದವರಾಗಿರುವುದರಿಂದ ಅವರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸುವುದಿಲ್ಲ ಎನ್ನಲಾಗುತ್ತಿದೆ.

ಬಿಜೆಪಿ ಈ ಹಿಂದೆ 2016 ರಲ್ಲಿ ಗುಜರಾತ್ ಚುನಾವಣೆಗೆ ಒಂದು ವರ್ಷ ಮುಂಚೆ ಅಂದಿನ ಸಿಎಂ ಆಗಿದ್ದ ಆನಂದಿ ಬೆನ್ ಪಟೇಲ್ ಅವರಿಂದ ರಾಜೀನಾಮೆ ಪಡೆದು ಸಿಎಂನ್ನು ಬದಲಾವಣೆ ಮಾಡಿತ್ತು.

SCROLL FOR NEXT