ದೇಶ

ಪೆಗಾಸಸ್ ಬೇಹುಗಾರಿಕೆ ವಿವಾದ ಕುರಿತು ಅಫಿಡವಿಟ್ಟು ಸಲ್ಲಿಸುವುದಿಲ್ಲ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿಕೆ

Sumana Upadhyaya

ನವದೆಹಲಿ: ಪೆಗಾಸೆಸ್ ಬೇಹುಗಾರಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಸ್ವತಂತ್ರ ತನಿಖೆ ನಡೆಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಪಟ್ಟಂತೆ ವಿಸ್ತಾರವಾದ ಅಫಿಡವಿಟ್ಟು ಸಲ್ಲಿಸುವ ಇಚ್ಛೆಯಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸೋಮವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠಕ್ಕೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ, ಈ ವಿವಾದದಲ್ಲಿ ಅಡಗಿಸಿಡುವಂತಹ ವಿಚಾರವೇನೂ ಇಲ್ಲ. ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದೆ.

ನ್ಯಾಯಪೀಠ ಮುಂದೆ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ, ಒಂದು ನಿರ್ದಿಷ್ಟ ಸಾಫ್ಟ್‌ವೇರ್ ಅನ್ನು ಸರ್ಕಾರ ಬಳಸುತ್ತದೆಯೋ ಇಲ್ಲವೋ ಎಂಬುದು ಸಾರ್ವಜನಿಕ ಚರ್ಚೆಯ ವಿಷಯವಲ್ಲ ಮತ್ತು ಈ ಮಾಹಿತಿಯನ್ನು ಅಫಿಡವಿಟ್‌ನ ಭಾಗವಾಗಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸುವುದಿಲ್ಲ ಎಂದು ಹೇಳಿದೆ.

ತಜ್ಞರ ಸಮಿತಿಯ ವರದಿಯನ್ನು ಸುಪ್ರೀಂ ಕೋರ್ಟ್ ಮುಂದೆ ಇಡಲಾಗುವುದು. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಯಾವುದನ್ನೂ ಸರ್ಕಾರ ಬಹಿರಂಗಪಡಿಸಲು ಬಯಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಸುಪ್ರೀಂ ಕೋರ್ಟ್ ಗೆ ಸಾಲಿಸಿಟರ್ ಜನರಲ್ ಮೆಹ್ತಾ ತಿಳಿಸಿದರು. 

ಕೇಂದ್ರವು ಈ ಹಿಂದೆ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ಟು ಸಲ್ಲಿಸಿ ಪೆಗಾಸಸ್ ಬೇಹುಗಾರಿಕೆಗೆ ಸಂಬಂಧಪಟ್ಟಂತೆ ಸ್ವತಂತ್ರ ತನಿಖೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಊಹೆ ಮತ್ತು ಪರಿಕಲ್ಪನೆ ಅಥವಾ ಇತರ ಆಧಾರರಹಿತ ಮಾಧ್ಯಮ ವರದಿಗಳು ಅಥವಾ ಅಪೂರ್ಣ ದೃಢೀಕರಿಸದ ವರದಿಗಳ ಆಧಾರವಾಗಿದೆ. ಈ ವಿವಾದ ಬಗ್ಗೆ ಸರ್ಕಾರದ ನಿಲುವನ್ನು ಈಗಾಗಲೇ ಸಂಸತ್ತಿನಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ ಎಂದು  ಸಾಲಿಸಿಟರ್ ಜನರಲ್ ಇಂದು ಹೇಳಿದ್ದಾರೆ.

SCROLL FOR NEXT