ದೇಶ

ನಮ್ಮ ಕಾನೂನು ವ್ಯವಸ್ಥೆಯನ್ನು ಭಾರತೀಯಗೊಳಿಸುವ ಅಗತ್ಯವಿದೆ: ಸಿಜೆಐ ಎನ್.ವಿ ರಮಣ

Srinivas Rao BV

ಬೆಂಗಳೂರು: ನಮ್ಮ ಕಾನೂನು ವ್ಯವಸ್ಥೆಯನ್ನು ಭಾರತೀಯಗೊಳಿಸುವುದು ಈ ಸಮಯದ ಅವಶ್ಯಕತೆ ಎಂದು ನ್ಯಾ. ಎನ್ ವಿ ರಮಣ ಹೇಳಿದ್ದಾರೆ.
 
ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ನ್ಯಾ. ಮೋಹನ್ ಎಂ ಶಾಂತನಗೌಡರ್ ಅವರಿಗೆ ಗೌರವ ಅರ್ಪಿಸಿ "ಭಾರತೀಯ ನ್ಯಾಯ-ಕಾನೂನು ವ್ಯವಸ್ಥೆ ವಿಷಯದ ಬಗ್ಗೆ ಮಾತನಾಡಿದ ಅವರು, ನಮ್ಮ ಕಾನೂನಿನ ವ್ಯವಸ್ಥೆಯನ್ನು ಭಾರತೀಯಗೊಳಿಸುವುದು ಈ ಸಮಯದ ಅಗತ್ಯತೆ ಎಂದು ಹೇಳಿದ್ದಾರೆ. ನಮ್ಮ ವ್ಯವಸ್ಥೆ, ಅಭ್ಯಾಸಗಳು, ನಿಯಮಗಳು ವಸಾಹತು ಮೂಲದ್ದಾಗಿದ್ದು ಭಾರತದ ಸಂಕೀರ್ಣತೆಗೆ, ಭಾರತೀಯ ಜನಸಂಖ್ಯೆಗೆ ಹಾಗೂ ಕೋರ್ಟ್ ಗಳ ಕಾರ್ಯನಿರ್ವಹಣೆಗೆ  ಹೊಂದುವುದಿಲ್ಲ ಎಂದು ಹೇಳಿದ್ದಾರೆ.

ಭಾರತೀಯಗೊಳಿಸುವುದು ಎಂದರೆ ನಮ್ಮ ಸಮಾಜದ ನೈಜ, ವಾಸ್ತವಗಳನ್ನು ಅಳವಡಿಸಿಕೊಂಡು ನ್ಯಾಯದಾನ ವ್ಯವಸ್ಥೆಯನ್ನು ಪ್ರಾದೇಶೀಕರಿಸುವುದು ಎಂಬುದಾಗಿದೆ ಎಂದು ಎನ್ ವಿ ರಮಣ ಹೇಳಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಕೌಟುಂಬಿಕ ವಿವಾದಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಕೋರ್ಟ್ ನಲ್ಲಿ ನಮ್ಮ ಪ್ರದೇಶದಿಂದ ಹೊರಗಿದ್ದೇವೆ ಎಂಬ ಭಾವನೆ ಮೂಡುವಂತಾಗುತ್ತದೆ. ಬಹುತೇಕ ಆಂಗ್ಲ ಭಾಷೆಗಳಲ್ಲಿರುವ ವಾದಗಳನ್ನು ಅಥವಾ ಕಲಾಪವನ್ನು ಅವರಿಗೆ ಅರ್ಥ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ತೀರ್ಪುಗಳು ಅತಿದೀರ್ಘವಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಥವಾ ತಮ್ಮ ಸ್ಥಿತಿ ಏನಾಗಿದೆ ಎಂಬುದನ್ನು ಅರಿತುಕೊಳ್ಳುವುದಕ್ಕೆ ದಾವೆದಾರರಿಗೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಅವರು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಸಿಜೆಐ ರಮಣ ಹೇಳಿದ್ದಾರೆ.

ನ್ಯಾಯದಾನದಲ್ಲಿ ಸರಳತೆ ನಮ್ಮ ಮುಖ್ಯ ಕಾಳಜಿಯಾಗಿರಬೇಕು, ನ್ಯಾಯದಾನವನ್ನು ಹೆಚ್ಚು ಪಾರದರ್ಶಕ, ಸುಲಭ ಮತ್ತು ಪರಿಣಾಮಕಾರಿ ವಾಗಿರುವಂತೆ ಮಾಡುವುದು ಮುಖ್ಯ ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT