ದೇಶ

ಬಂಗಾಳ ರಾಜ್ಯಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಭವಾನಿಪುರ ಉಪಚುನಾವಣೆಯತ್ತ ಗಮನ: ಬಿಜೆಪಿ

Lingaraj Badiger

ಕೋಲ್ಕತ್ತಾ: ಅಕ್ಟೋಬರ್ 4 ರಂದು ನಡೆಯಲಿರುವ ರಾಜ್ಯಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸದಿರಲು ಪಶ್ಚಿಮ ಬಂಗಾಳ ಬಿಜೆಪಿ ಸೋಮವಾರ ತೀರ್ಮಾನಿಸಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸುತ್ತಿರುವ ಭವಾನಿಪುರದಲ್ಲಿ ಉಪಚುನಾವಣೆಯ ಮೇಲೆ ಹೆಚ್ಚು ಗಮನ ನೀಡಲಾಗುವುದು ಎಂದು ಕೇಸರಿ ಪಕ್ಷ ಹೇಳಿದೆ.

ಆಡಳಿತಾರೂಢ ಟಿಎಂಸಿ ಇತ್ತೀಚೆಗೆ ಕಾಂಗ್ರೆಸ್ ನಿಂದ ಪಕ್ಷಾಂತರಗೊಂಡಿದ್ದ ಸುಶ್ಮಿತಾ ದೇವ್ ಅವರನ್ನು ರಾಜ್ಯಸಭಾ ಉಪ ಚುನಾವಣಾ ಕಣಕ್ಕಿಳಿಸಿದ್ದು, ಅವರ ವಿರುದ್ಧ ಅಭ್ಯರ್ಥಿ ಹಾಕದಿರಲು ಪ್ರಮುಖ ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಸುಶ್ಮಿತಾ ದೇವ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಟಿಎಂಸಿ ನಾಯಕ ಮಾನಸ್ ಭುನಿಯಾ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಅವರ ರಾಜ್ಯಸಭಾ ಸ್ಥಾನ ತೆರವಾಗಿದ್ದು, ಅದಕ್ಕೆ ಅಕ್ಟೋಬರ್ 4ರಂದು ಉಪ ಚುನಾವಣೆ ನಡೆಯುತ್ತಿದೆ.

ಬಂಗಾಳದ 16 ರಾಜ್ಯಸಭಾ ಸ್ಥಾನಗಳ ಪೈಕಿ ಟಿಎಂಸಿ 11, ಕಾಂಗ್ರೆಸ್ ಎರಡು ಮತ್ತು ಸಿಪಿಐ(ಎಂ) ಒಂದು ಸ್ಥಾನವನ್ನು ಹೊಂದಿದೆ. 

"ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ಹಾಕುವುದಿಲ್ಲ. ಫಲಿತಾಂಶವು ಪೂರ್ವನಿರ್ಧರಿತವಾಗಿದೆ. ವಿಧಾನಸಭೆಗೆ ಆಯ್ಕೆಯಾಗದ ಸಿಎಂ ಮಮತಾ ಅವರನ್ನು ಮತ್ತೊಮ್ಮೆ ಆಯ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿ. ಜೈ ಮಾ ಕಾಳಿ" ಎಂದು ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಅವರನ್ನು ಅಧಿಕಾರಿ ಸೋಲಿಸಿದ್ದರು.

SCROLL FOR NEXT