ದೇಶ

ಪತ್ರಕರ್ತ ತರುಣ್ ತೇಜ್ ಪಾಲ್ ಪ್ರಕರಣ: ಅಕ್ಟೋಬರ್ 27ಕ್ಕೆ ವಿಚಾರಣೆ ಮುಂದೂಡಿಕೆ

Shilpa D

ಪಣಜಿ: 2013 ರ ಅತ್ಯಾಚಾರ ಪ್ರಕರಣದಲ್ಲಿ ಪತ್ರಕರ್ತ ತರುಣ್ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿದ ಆದೇಶದ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಅಕ್ಟೋಬರ್ 27 ರಂದು ಕೈಗೆತ್ತಿಕೊಳ್ಳುವುದಾಗಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಹೇಳಿದೆ. 

ಗೋವಾ ಸರ್ಕಾರದ ಪರ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ದೇವಿದಾಸ್ ಪಂಗಂ ಮತ್ತು ತೇಜ್‌ಪಾಲ್ ಪರ ವಕೀಲರು ಮುಂದಿನ ವಿಚಾರಣೆಯ ದಿನಾಂಕವನ್ನು ತಿಳಿಸುವಂತೆ ನ್ಯಾಯಮೂರ್ತಿಗಳಾದ ಎಂ ಎಸ್ ಸೋನಾಕ್ ಮತ್ತು ಎಂ ಎಸ್ ಜಾವಲ್ಕರ್ ಅವರ ಪೀಠವನ್ನು ಕೇಳಿದರು. 

ಅರ್ಜಿ ಕೈಗೆತ್ತಿಕೊಂಡ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 27 ಕ್ಕೆ ಮುಂದೂಡಿತು. ನ್ಯಾಮೂರ್ತಿ ಸೊನಾಕ್‌ ಅವರು, ’ಈ ಪ್ರಕರಣದ ಮಂದಿನ ವಿಚಾರಣೆಯನ್ನು ವರ್ಚುವಲ್‌ ಮೂಲಕ ನಡೆಸಲು ನ್ಯಾಯಾಲಯ ಸೌಲಭ್ಯ ಕಲ್ಪಿಸಲಿದೆ. ಅಂದಿನ ನ್ಯಾಯಾಲಯದ ಕಲಾಪದಲ್ಲಿ ಗೋವಾ ಸರ್ಕಾರದ ಪರವಾಗಿ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ದೆಹಲಿಯಿಂದ ಪಾಲ್ಗೊಳ್ಳಲಿದ್ದಾರೆ‘ ಎಂದು ಹೇಳಿದರು.

ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸುವುದರ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ವನವಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 20 ಕ್ಕೆ ಮುಂದೂಡಿತ್ತು. 

SCROLL FOR NEXT