ದೇಶ

ಸೆ.25ರ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕೃಷಿ ಮಸೂದೆ ವಿರುದ್ಧ ಪ್ರತಿಭಟಿಸಿ: ಅಮೆರಿಕಾದಲ್ಲಿರುವ ಭಾರತೀಯರಿಗೆ ರಾಕೇಶ್ ಟಿಕಾಯತ್ ಮನವಿ

Manjula VN

ಘಾಜಿಯಾಬಾದ್: ಸೆಪ್ಟೆಂಬರ್ 25 ರಂದು ಅಮೆರಿಕಾದಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ವಿವಾದಿತ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸುವಂತೆ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು ಅಮೆರಿಕಾದಲ್ಲಿರುವ ಭಾರತೀಯರಿಗೆ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ. 

ಅಮೆರಿಕಾದಲ್ಲಿರುವ ಭಾರತೀಯರಿಗೆ ವಿಡಿಯೋ ಸಂದೇಶ ರವಾನಿಸಿರುವ ಅವರು, ಕಳೆದ 10 ತಿಂಗಳುಗಳಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ವಿರುದ್ಧ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಈ ವರೆಗೂ 750 ರೈತರು ಸಾವನ್ನಪ್ಪಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಮಸೂದೆಗಳನ್ನು ವಾಪಸ್ ಪಡೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ ಅಮೆರಿಕಾಗೆ ಭೇಟಿ ನೀಡಿದ್ದು, ಬೈಡನ್ ಹಾಗೂ ಕಮಲಾ ಹ್ಯಾರಿಸ್ ಸೇರಿದಂತೆ ಇನ್ನಿತರೆ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಶನಿವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಹೀಗಾಗಿ ಅಮೆರಿಕಾದಲ್ಲಿರುವ ಎಲ್ಲಾ ಭಾರತೀಯರೂ ನ್ಯೂಯಾರ್ಕ್ ನಲ್ಲಿ ಸೆಪ್ಟೆಂಬರ್ 25 ರಂದು ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಬೇಕು. ಈ ಮೂಲಕ ರೈತರಿಗೆ ಬೆಂಬಲ ನೀಡಬೇಕು. ನಿಮ್ಮ ವಾಹನಗಳ ಮೇಲೆ ರೈತರ ಧ್ವಜಗಳನ್ನು ಅಂಟಿಸಿಕೊಳ್ಳಿ, ರೈತರಿಲ್ಲದೆ ಆಹಾರವಿಲ್ಲ ಎಂಬ ಬ್ಯಾನರ್ ಗಳನ್ನು ಪ್ರದರ್ಶಿಸಿ ನಮಗೆ ಬೆಂಬಲ ನೀಡಿ ಮನವಿ ಮಾಡಿಕೊಂಡಿದ್ದಾರೆ. 

ಇದಷ್ಟೇ ಅಳ್ಲದೆ, ಅಮೆರಿಕಾ ಅಧ್ಯಕ್ಷರಿಗೂ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಟಿಕಾಯತ್ ಅವರು, ಭಾರತೀಯ ರೈತರಾದ ನಾವು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ 3 ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಕಳೆದ 11 ತಿಂಗಳುಗಳಿಂದ 700 ರೈತರು ಸಾವನ್ನಪ್ಪಿದ್ದಾರೆ. ಈ ಕರಾಳ ಕಾನೂನುಗಳನ್ನು ಹಿಂಪಡೆದುಕೊಂಡರೆ, ನಮ್ಮನ್ನು ರಕ್ಷಣೆ ಮಾಡಿದಂತಾಗುತ್ತದೆ. ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ ದಯವಿಟ್ಟು ಈ ವಿಚಾರದತ್ತ ಗಮನಹರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. 

SCROLL FOR NEXT