ದೇಶ

ಚಂಡಮಾರುತ: ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾ, ಆಂಧ್ರದಲ್ಲಿ ಎನ್ ಡಿಆರ್ ಎಫ್ ನಿಂದ 18 ತಂಡಗಳ ನಿಯೋಜನೆ

Srinivas Rao BV

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಉಂಟಾಗುತ್ತಿರುವ ಚಂಡಮಾರುತಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್ ಡಿಆರ್ ಎಫ್) ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. 

ಆಂಧ್ರಪ್ರದೇಶ, ಒಡಿಶಾಗಳಲ್ಲಿ ಎನ್ ಡಿಆರ್ ಎಫ್ ನ 18 ತಂಡಗಳನ್ನು ನಿಯೋಜಿಸುತ್ತಿದೆ. ಎನ್ ಡಿಆರ್ ಎಫ್ ನ ಪ್ರಧಾನ ನಿರ್ದೇಶಕ ಎಸ್ ಎನ್ ಪ್ರಧಾನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಶನಿವಾರ ರಾತ್ರಿ ವೇಳೆಗೆ ಆಂಧ್ರಪ್ರದೇಶದಲ್ಲಿ 5 ತಂಡ, ಒಡಿಶಾದಲ್ಲಿ 13 ತಂಡಗಳನ್ನು ನಿಯೋಜಿಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

ಒಡಿಶಾದ ಬಾಲಸೋರ್, ಗಂಜಾಬ್, ಗಜಪತಿ, ರಾಯಗಢ, ಕೊರಾಪುತ್, ನಯಾಗರ್, ಮಲ್ಕಂಗಿರಿ ಜಿಲ್ಲೆಗಳಲ್ಲಿ ಎನ್ ಡಿಆರ್ ಎಫ್ ಪಡೆಗಳನ್ನು ನಿಯೋಜಿಸಲಾಗುತ್ತದೆ.

ಆಂಧ್ರಪ್ರದೇಶದ ವಿಶಾಖಪಟ್ಟಣ, ಶ್ರೀಕಾಕುಳಂ, ಯನಮ್, ವಿಜಿಯನಗರಮ್ ಗಳಲ್ಲಿ ಎನ್ ಡಿಆರ್ ಎಫ್ ಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಎನ್ ಡಿಆರ್ ಎಫ್ ತಿಳಿಸಿದೆ.

ಒಂದು ಎನ್ ಡಿಆರ್ ಎಫ್ ತಂಡದಲ್ಲಿ 47 ಸಿಬ್ಬಂದಿಗಳಿರಲಿದ್ದು, ಮರ, ಪೋಲ್ ಗಳನ್ನು ತುಂಡರಿಸುವ ಸಾಧನಗಳು, ಸಂವಹನ ಗ್ಯಾಡ್ಜೆಟ್ಸ್ ಗಳು, ಗಾಳಿ ತುಂಬಬಹುದಾದ ದೋಣಿಗಳು, ಮೂಲಭೂತ ವೈದ್ಯಕೀಯ ನೆರವು, ರಕ್ಷಣಾ ಕಾರ್ಯಾಚರಣೆಗಳಲ್ಲಿ ರಕ್ಷಿಸಿದ ಮಂದಿಗೆ ಅಗತ್ಯವಿರುವ ನೆರವು ನೀಡುವ ಸಾಧನಗಳನ್ನು ಹೊಂದಿರುತ್ತದೆ.

ಒಡಿಶಾದ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದ 7 ಜಿಲ್ಲೆಗಳಲ್ಲಿ- ಗಜಪತಿ, ಗಂಜಾಮ್, ರಾಯಗಡ, ಕೋರಾಪುತ್, ಮಲ್ಕನ್ಗಿರಿ, ನಬರಂಗಪುರ, ಕಂಧಮಲ್ ಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಚಂಡಮಾರುತ ಒಡಿಶಾ ಹಾಗೂ ಆಂಧ್ರಪ್ರದೇಶದ ದಕ್ಷಿಣಕ್ಕೆ ಬೀಸಲಿದೆ.

SCROLL FOR NEXT