ದೇಶ

3 ದಿನದಲ್ಲಿ 2ನೇ ಬಾರಿಗೆ ಸೋನಿಯಾ ಭೇಟಿ ಮಾಡಿದ ‘ಚುನಾವಣಾ ಚಾಣಕ್ಯ’ ಪ್ರಶಾಂತ್ ಕಿಶೋರ್

Srinivasamurthy VN

ನವದೆಹಲಿ: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಕಳೆದ ಮೂರು ದಿನದ ಅಂತರದಲ್ಲಿ ಇದು ಅವರ 2ನೇ ಭೇಟಿಯಾಗಿದೆ.

ಇತ್ತೀಚಿಗೆ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪಕ್ಷಕ್ಕೆ 2024ರ ಚುನಾವಣಾ ಪ್ರಸ್ತಾವನೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದ ಪುನರುಜ್ಜೀವನಕ್ಕಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಹಾಗು ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೇ ಸೇರಿಸಿಕೊಳ್ಳಲು ಕಾಂಗ್ರೆಸ್ ಚಿಂತಿಸಿದ್ದು ಸೋಮವಾರ ಈ ಪ್ರಮುಖ ವಿಚಾರದ ಬಗ್ಗೆ ಸೋನಿಯಾಗಾಂಧಿ ಪಕ್ಷದ ಕೆಲ ಆಯ್ದ ಪ್ರಮುಖರೊಂದಿಗೆ ಸಭೆ ಮಾಡಿದ್ದರು.

ಇದರ ಬೆನ್ನಲ್ಲೇ ಮತ್ತೊಮ್ಮೆ ಪ್ರಶಾಂತ್ ಕಿಶೋರ್ ಸೋನಿಯಾ ಗಾಂಧಿ ಅವರನ್ನು ಸಭೆಯಲ್ಲಿ ಭೇಟಿ ಮಾಡಿರೋದು ಹೆಚ್ಚಿನ ಕುತೂಹಲ ಮೂಡಿಸಿದೆ.

ಕೆಲ ರಾಜ್ಯಗಳಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆಯ ಮುಂದಿನ ಸುತ್ತಿನ ಯೋಜನಾ ಅಧಿವೇಶನಕ್ಕಾಗಿ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಸೋಮವಾರ ಸಂಜೆ ಭೇಟಿಯಾಗಿದ್ದಾರೆ.  ಕಳೆದ ಶನಿವಾರವಷ್ಟೇ ಅವರು ಆಯ್ದ ಕಾಂಗ್ರೆಸ್ ನಾಯಕರ ಮುಂದೆ ಮಿಷನ್ 2024 ಕುರಿತು ವಿವರವಾದ ಪ್ರಸ್ತಾವನೆ ಮುಂದಿಟ್ಟಿದ್ದರು.

ನಿನ್ನೆ ನಡೆದ ಸಭೆಯಲ್ಲಿ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳು ಮತ್ತು ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮುಂದಿನ ವರ್ಷ ನಡೆಯಲಿರುವ ರಾಜ್ಯಗಳ ಚುನಾವಣೆಗಳ ತಂತ್ರಗಾರಿಕೆ ಸಭೆಯ ಪ್ರಮುಖ ಅಜೆಂಡಾವಾಗಿತ್ತು ಎಂದು ತಿಳಿದುಬಂದಿದೆ.
 

SCROLL FOR NEXT