ದೇಶ

ತೈವಾನ್ ಗೆ ಹತ್ತಿರದಲ್ಲಿರುವ ಜಪಾನ್ ದ್ವೀಪದ ಇಇಝೆಡ್ ಮೇಲೆ ಬಿದ್ದ ಚೀನಾದ ಕ್ಷಿಪಣಿಗಳು!?

Srinivas Rao BV

ಟೋಕಿಯೋ: ಚೀನಾದ್ದು ಎನ್ನಲಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್ ನ ವಿಶೇಷ ಆರ್ಥಿಕ ವಲಯ (ಇಇಝೆಡ್)  ಮೇಲೆ ಬಿದ್ದಿದೆ ಎಂದು ಜಪಾನ್ ನ ರಕ್ಷಣಾ ಸಚಿವ ನೊಬುವೊ ಕಿಶಿ ಹೇಳಿದ್ದಾರೆ.
 
ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಗೆ ಭೇಟಿ ನೀಡಿದ್ದಕ್ಕೆ ಪ್ರತಿಯಾಗಿ ಚೀನಾ ಸೇನಾ ಕಸರತ್ತುಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ ಜಪಾನ್ ಮೇಲೆ ಚೀನಾದ್ದು ಎನ್ನಲಾದ ಕ್ಷಿಪಣಿ ಬಿದ್ದಿರುವ ಸುದ್ದಿ ಬಂದಿದೆ.
 
ಜಪಾನ್ ನ ದಕ್ಷಿಣ ತೀರದ ದ್ವೀಪ ಒಕಿನಾವಾದ ಭಾಗಗಳು ತೈವಾನ್ ಗೆ ಅತ್ಯಂತ ಹತ್ತಿರದಲ್ಲಿರುವುದು ಗಮನಾರ್ಹವಾಗಿದೆ. 

ಚೀನಾ ಒಟ್ಟು 9 ಮಿಸೈಲ್ ಗಳನ್ನು ಉಡಾಯಿಸಿದ್ದು, ಈ ಪೈಕಿ 5 ಜಪಾನ್ ನ ಇಇಝೆಡ್ ಮೇಲೆ ಬಂದು ಬದ್ದಿದೆ. ಚೀನಾ ಉಡಾಯಿಸಿರುವುದು 9 ಕ್ಷಿಪಣಿಗಳನ್ನು ಎನ್ನುವುದು ಜಪಾನ್ ನ ವಿಶ್ಲೇಷಣೆಯಾಗಿದೆ.

ಕ್ಷಿಪಣಿಗಳು ತನ್ನ ಜಾಗಕ್ಕೆ ಬಂದು ಬಿದ್ದಿರುವುದರ ಬಗ್ಗೆ ಜಪಾನ್ ರಾಜತಾಂತ್ರಿಕ ಮಟ್ಟದಲ್ಲಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಭದ್ರತೆ ಹಾಗೂ ನಮ್ಮ ಪ್ರಜೆಗಳ ಸುರಕ್ಷತೆ ಮೇಲೆ ಪರಿಣಾಮ ಬೀರುವ ಅತ್ಯಂತ ಗಂಭೀರ ಸಮಸ್ಯೆ ಎಂದು ಹೇಳಿದೆ.

ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿ ಚೀನಾ ಯುದ್ಧ ಸನ್ನದ್ಧಗೊಳ್ಳುವಂತೆ ಮಾಡಿದೆ. ತೈವಾನ್ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಸೇನಾ ಚಟುವಟಿಕೆಗಳನ್ನು ಚೀನಾ ನಡೆಸುತ್ತಿರುವುದು ತೈವಾನ್ ನ್ನು ಬೆದರಿಸುವ ಯತ್ನವಾಗಿದೆ. 

SCROLL FOR NEXT