ದೇಶ

ಪ್ರತಿಪಕ್ಷಗಳ ಗಲಾಟೆ: ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿಕೆ

Ramyashree GN

ನವದೆಹಲಿ: ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಲೋಕಸಭೆಯ ಕಲಾಪವನ್ನು ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಸದನವು ಸಭೆ ಸೇರಿದ ತಕ್ಷಣವೇ ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷ ಸದಸ್ಯರು ಇ.ಡಿ ಕ್ರಮ, ಬೆಲೆ ಏರಿಕೆ ಮತ್ತು ಇತರ ವಿಷಯಗಳನ್ನು ಪ್ರಸ್ತಾಪಿಸಲು ಬಯಸಿದರು.

ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಕಾಂಗ್ರೆಸ್ ಒಡೆತನದ ಪತ್ರಿಕೆ ನ್ಯಾಷನಲ್ ಹೆರಾಲ್ಡ್ ಆವರಣದಲ್ಲಿದ್ದ ಯಂಗ್ ಇಂಡಿಯಾ ಕಂಪನಿಯ ಕಚೇರಿಗೆ ಬುಧವಾರ ಇ.ಡಿ ತಾತ್ಕಾಲಿಕವಾಗಿ ಬೀಗ ಹಾಕಿದೆ.

ಈ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ನುಗ್ಗಿದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು, ಸದಸ್ಯರು ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ಮನವಿ ಮಾಡಿದರು. ಆದರೆ, ಅವರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಗದ್ದಲ ಮುಂದುವರಿದಾಗ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಇನ್ನೊಂದೆಡೆ ರಾಜ್ಯಸಭೆಯಲ್ಲೂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ವಿಚಾರವನ್ನು ಎತ್ತಿದರು. ಇದೇ ವಿಚಾರವಾಗಿ ವಿಪಕ್ಷಗಳ ಗದ್ದಲ ಮುಂದುವರಿಸಿದ್ದರಿಂದ ರಾಜ್ಯಸಭೆಯನ್ನೂ 12 ಗಂಟೆವರೆಗೆ ಮುಂದೂಡಲಾಗಿತ್ತು.

SCROLL FOR NEXT