ದೇಶ

ಉಚಿತ ಶಿಕ್ಷಣ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ವಿರೋಧಿ ವಾತಾವರಣ ಸೃಷ್ಟಿಸಲಾಗುತ್ತಿದೆ: ಕೇಜ್ರಿವಾಲ್

Lingaraj Badiger

ನವದೆಹಲಿ: ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಉಚಿತ ಸರ್ಕಾರಿ ಕಲ್ಯಾಣ ಯೋಜನೆಗಳನ್ನು ಬಲಪಡಿಸುವ ಬದಲು ಫ್ರೀಬಿಸ್ ಎಂದು ಹೇಳುವ ಮೂಲಕ ಅವುಗಳ ವಿರೋಧಿ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.

ಆನ್‌ಲೈನ್ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, ಕೇಂದ್ರ ಸರ್ಕಾರ ಉಚಿತ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಪ್ರತಿ ಮನೆಗೆ 300 ಯೂನಿಟ್ ವಿದ್ಯುತ್ ಮತ್ತು 'ನಿರುದ್ಯೋಗ ಭತ್ಯೆ' ನೀಡಬೇಕೆಂದು ಒತ್ತಾಯಿಸಿದರು.

‘‘ಸರ್ಕಾರಿ ಸೌಲಭ್ಯಗಳಾದ ಉಚಿತ ಶಿಕ್ಷಣ, ಉಚಿತ ಚಿಕಿತ್ಸೆ ನೀಡುವುದನ್ನು ‘ರೇವಡಿ’ ಅಥವಾ ‘ಫ್ರೀಬಿ’ ಎಂದು ಕರೆಯುವ ಕೆಲವರು, ದೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯ ವಿರೋಧಿ ವಾತಾವರಣ ಸೃಷ್ಟಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

"ನಾವು ದೇಶದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ ಮತ್ತು ಈ ಸಂದರ್ಭದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಬಲಪಡಿಸಲು ನಾವು ಯೋಜಿಸಬೇಕು. ಆದರೆ ಅದರ ವಿರುದ್ಧ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ" ಎಂದು ದೆಹಲಿ ಸಿಎಂ ಆರೋಪಿಸಿದ್ದಾರೆ.

ಇಂತಹ ವಿಷಯಗಳನ್ನು ವಿರೋಧಿಸುವವರನ್ನು ನಾವು ದೇಶದ್ರೋಹಿಗಳು ಎಂದು ಕರೆಯಬೇಕು. "ಈ ಜನರು ತಮ್ಮ ಸ್ನೇಹಿತರ 10 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದಾರೆ. ಅಂತಹ ಜನರನ್ನು ದೇಶದ್ರೋಹಿಗಳೆಂದು ಬಿಂಬಿಸಬೇಕು ಮತ್ತು ಅವರ ವಿರುದ್ಧ ತನಿಖೆ ನಡೆಸಬೇಕು" ಎಂದು ಕೇಜ್ರಿವಾಲ್ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

SCROLL FOR NEXT