ದೇಶ

ಬಿಹಾರದಲ್ಲಿ ರಾಜಕೀಯ ಹೈಡ್ರಾಮಕ್ಕೆ ತೆರೆ: ಬಿಜೆಪಿಯೊಂದಿಗಿನ ಮೈತ್ರಿ ಮುರಿದ ಜೆಡಿಯು

Ramyashree GN

ಪಾಟ್ನಾ: ಬಿಹಾರದಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿಗೆ ಬ್ರೇಕ್ ಬೀಳುವ ಸಮಯ ಬಂದಾಗಿದೆ. ಇಂದು ಪಕ್ಷದ ಸಂಸದರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಯು ಸಂಸದರು ಮತ್ತು ಶಾಸಕರ ಸಭೆ ಮುಕ್ತಾಯವಾಗಿದ್ದು, ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಳ್ಳಲು ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಪಾಲ ಫಾಗು ಚೌಹಾಣ್ ಅವರ ಭೇಟಿಗೆ ಸಂಜೆ 4 ಗಂಟೆಗೆ ಸಮಯ ಕೇಳಿದ್ದಾರೆ ಎನ್ನಲಾಗಿದೆ.

ಬಿಹಾರ ರಾಜಕೀಯಕ್ಕೆ ಸಂಬಂಧಿಸಿ ಹಲವು ಊಹಾಪೋಹಗಳು ಹರಿದಾಡುತ್ತಿರುವ ನಡುವೆಯೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಶಾಸಕರ ಸಭೆಗಳ ಮೇಲೆಯೇ ಎಲ್ಲ ಕಣ್ಣು ನೆಟ್ಟಿತ್ತು. ನಿತೀಶ್‌ಕುಮಾರ್ ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡರೆ ಹೊಸ ಸರ್ಕಾರದ ರಚನೆಗೆ ಬೆಂಬಲ ನೀಡಲು ಕಾಂಗ್ರೆಸ್ ಈಗಾಗಲೇ ನಿರ್ಧರಿಸಿದೆ.

ಬಿಹಾರದಲ್ಲಿ ಜೆಡಿ(ಯು) ಪಕ್ಷಕ್ಕೆ ಆರ್‌.ಸಿ.ಪಿ. ಸಿಂಗ್‌ ರಾಜೀನಾಮೆ ಸಲ್ಲಿಸಿದ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಾಗಿವೆ. ಸದ್ಯ ಜೆಡಿ(ಯು) ಕೇಂದ್ರ ಸಚಿವ ಸಂಪುಟದಿಂದ ಹೊರಗಿದೆ. ಆರ್‌.ಸಿ.ಪಿ. ಸಿಂಗ್ ರಾಜೀನಾಮೆ ನೀಡಿದ ನಂತರ ಯಾವುದೇ ಪ್ರಾತಿನಿಧ್ಯವಿಲ್ಲದೆ ಉಳಿದಿರುವ ಕೇಂದ್ರ ಸಚಿವ ಸಂಪುಟವನ್ನು ಸೇರುವುದಿಲ್ಲ ಎಂದು ಜೆಡಿ(ಯು) ಪಕ್ಷವು ಭಾನುವಾರ ಸ್ಪಷ್ಟಪಡಿಸಿತ್ತು.

SCROLL FOR NEXT