ದೇಶ

ಪಕ್ಷ ಸೇರಿದ 10 ತಿಂಗಳಲ್ಲೇ ಟಿಎಂಸಿ ತೊರೆದ ಮಾಜಿ ಸಂಸದ ಪವನ್ ವರ್ಮಾ

Lingaraj Badiger

ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ 10 ತಿಂಗಳಲ್ಲೇ ರಾಜ್ಯಸಭಾ ಮಾಜಿ ಸಂಸದ ಪವನ್ ವರ್ಮಾ ಅವರು ಶುಕ್ರವಾರ ಟಿಎಂಸಿಗೆ ರಾಜೀನಾಮೆ ನೀಡಿದ್ದಾರೆ. ಪವನ್ ವರ್ಮಾ ಜೆಡಿಯು ತೊರೆದ ಬಳಿಕ ಕಳೆದ ವರ್ಷ ನವೆಂಬರ್‌ನಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೇರಿದ್ದರು.

ತೃಣಮೂಲದಿಂದ ನಿರ್ಗಮಿಸುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿರುವ  ವರ್ಮಾ, “ಪ್ರೀತಿಯ ಮಮತಾ ಬ್ಯಾನರ್ಜಿ ಜೀ, ದಯವಿಟ್ಟು ತೃಣಮೂಲ ಕಾಂಗ್ರೆಸ್‌ಗೆ ನನ್ನ ರಾಜೀನಾಮೆಯನ್ನು ಸ್ವೀಕರಿಸಿ. ನನಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ನಿಮ್ಮ ಪ್ರೀತಿ ಮತ್ತು ಸೌಜನ್ಯಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ನಿಮ್ಮ ಸಂಪರ್ಕದಲ್ಲಿರುವುದನ್ನು ಬಯಸುತ್ತೇನೆ. ನಿಮಗೆ ಶುಭ ಹಾರೈಸುತ್ತೇನೆ.” ಎಂದಿದ್ದಾರೆ.

ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗೆ ಜೆಡಿಯು ಮೈತ್ರಿ ಮುರಿದುಕೊಂಡ ನಿತೀಶ್ ಕುಮಾರ್ ಮಹಾಘಟಬಂಧನ್‌ಗೆ ಮರಳಿದ ನಂತರ ಪವನ್ ವರ್ಮಾ ರಾಜೀನಾಮೆ ನೀಡಿರುವುದು ಕುತೂಹಲ ಮೂಡಿಸಿದೆ.

ವರ್ಮಾ ಅವರನ್ನು 2020 ರ ಜನವರಿಯಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಜೊತೆಗೆ ಪಕ್ಷದ ಶಿಸ್ತು ಅನುಸರಿಸದ ಆರೋಪದ ಮೇಲೆ ಜೆಡಿಯುನಿಂದ ಹೊರಹಾಕಲಾಗಿತ್ತು.

ಪವನ್ ವರ್ಮಾ ಅವರು ಹಲವಾರು ದೇಶಗಳಿಗೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರೂ ಆಗಿದ್ದಾರೆ. ವರ್ಮಾ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ – ಡ್ರುಕ್ ತುಕ್ಸೆ ಪ್ರಶಸ್ತಿಯನ್ನು ಪಡೆದಿದ್ದಾರೆ.

SCROLL FOR NEXT