ದೇಶ

75 ವರ್ಷಗಳ ಹಿಂದೆ, ಭಾರತ ಸತ್ಯದ ಹಾದಿಯಲ್ಲಿ ನಡೆಯುವ ಮೂಲಕ ತನ್ನ ಶಕ್ತಿ ತೋರಿಸಿದೆ: ರಾಹುಲ್ ಗಾಂಧಿ

Lingaraj Badiger

ನವದೆಹಲಿ: 75 ವರ್ಷಗಳ ಹಿಂದೆ ಭಾರತ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆಯುವ ಮೂಲಕ ಇಡೀ ಜಗತ್ತಿಗೆ ತನ್ನ ಶಕ್ತಿಯನ್ನು ತೋರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಆದರೆ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

ಇಂದು ಬೆಳಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ “ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳುಮಾಡುತ್ತಿದೆ. ದೇಶವು ಅದರ ವಿರುದ್ಧ ಹೋರಾಡಬೇಕಾಗುತ್ತದೆ. ನಾವು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ತೊಡೆದುಹಾಕಬೇಕು” ಎಂದು ಹೇಳಿದ್ದರು.

ಸ್ವಜನಪಕ್ಷಪಾತ ಮತ್ತು ಕುಟುಂಬ ರಾಜಕೀಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗಳ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್, ಈ ವಿಷಯಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲರಿಗೂ ಸ್ವಾತಂತ್ರ್ಯದ ಶುಭಾಶಯಗಳು ಎಂದಷ್ಟೇ ಉತ್ತರಿಸಿದರು.

ಇದಕ್ಕು ಮುನ್ನ ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರಾಷ್ಟ್ರಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣದ ಉಲ್ಲೇಖವನ್ನು ಹಂಚಿಕೊಂಡ ಅವರು, ಭಾರತದ ಶ್ರೀಮಂತ ಇತಿಹಾಸದ ಚಿತ್ರಗಳ ಸಂಯೋಜನೆಯನ್ನು ಪೋಸ್ಟ್ ಮಾಡಿದ್ದಾರೆ.

SCROLL FOR NEXT