ದೇಶ

75 ವರ್ಷಗಳಲ್ಲಿ ಸಾಕಷ್ಟು ಸಾಧಿಸಿದ್ದೇವೆ. ಆದರೆ, ಈ ಅಸ್ವಸ್ಥ ಸರ್ಕಾರ ಅದನ್ನು ಎಂದಿಗೂ ಒಪ್ಪಿಕೊಳ್ಳಲ್ಲ: ಸೋನಿಯಾ ಗಾಂಧಿ

Ramyashree GN

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ತನ್ನ ಹರ್ ಘರ್ ತಿರಂಗಾ ಜಾಹೀರಾತಿನಿಂದ ನೆಹರೂ ಅವರನ್ನು ಕೈಬಿಟ್ಟ ವಿಚಾರವಾಗಿ ವಿವಾದ ಭುಗಿಲೆದ್ದಿತ್ತು. ಅದಾದ ಒಂದು ದಿನದ ಬಳಿಕ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಸ್ವಾತಂತ್ರ್ಯ ದಿನದ ಶುಭಾಶಯ ಕೋರುವ ವೇಳೆ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

'ಸ್ನೇಹಿತರೇ, ಕಳೆದ 75 ವರ್ಷಗಳಲ್ಲಿ ನಾವು ಸಾಕಷ್ಟು ಸಾಧಿಸಿದ್ದೇವೆ. ಆದರೆ, ಇಂದಿನ ಅಸ್ವಸ್ಥ ಸರ್ಕಾರವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮಹಾನ್ ತ್ಯಾಗ ಮತ್ತು ದೇಶದ ಅದ್ಭುತ ಸಾಧನೆಗಳನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಸೋನಿಯಾ ಗಾಂಧಿಯವರು ಹೇಳಿದ್ದಾರೆ.

'ರಾಜಕೀಯ ಲಾಭಕ್ಕಾಗಿ ಮಾಡುವ ಐತಿಹಾಸಿಕ ಸತ್ಯಗಳ ಯಾವುದೇ ತಪ್ಪು ಚಿತ್ರಣವನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದಿಲ್ಲ ಅಥವಾ ಸುಳ್ಳಿನ ಆಧಾರದ ಮೇಲೆ ಗಾಂಧಿ-ನೆಹರು-ಪಟೇಲ್-ಆಜಾದ್ ಅವರನ್ನು ಅವಮಾನಿಸಲು ಅವಕಾಶ ನೀಡುವುದಿ' ಎಂದು ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಅವರು 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಐತಿಹಾಸಿಕ ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ ಸಮರ ಸಾರಿದರು. ರಾಜಕೀಯದಲ್ಲಿರುವ 'ಬಾಯಿ-ಬತಿಜಾವಾದ್' ಭಾರತದ ಎಲ್ಲಾ ಸಂಸ್ಥೆಗಳನ್ನು ಭೇದಿಸಿ, ನಿಜವಾದ ಪ್ರತಿಭೆಗಳನ್ನು ಮರೆಮಾಚಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸೋನಿಯಾ ಗಾಂಧಿ ಅವರು ಇದಕ್ಕೆ ತಿರುಗೇಟು ನೀಡಿದ್ದಾರೆ.

ಭಾನುವಾರ, 1947 ರಲ್ಲಿ ಭಾರತದ ವಿಭಜನೆಗೆ ಜವಾಹರ್ ಲಾಲ್ ನೆಹರು ಅವರನ್ನು ದೂಷಿಸುವ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿತ್ತು. ಇದು ಕಾಂಗ್ರೆಸ್ಸಿಗರನ್ನು ಕೆರಳುವಂತೆ ಮಾಡಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್,  'ಸತ್ಯವೆಂದರೆ ಸಾವರ್ಕರ್ ಅವರು 2 ರಾಷ್ಟ್ರದ ಸಿದ್ಧಾಂತವನ್ನು ಹುಟ್ಟುಹಾಕಿದರು ಮತ್ತು ಜಿನ್ನಾ ಅದನ್ನು ಪರಿಪೂರ್ಣಗೊಳಿಸಿದರು. 'ನಾವು ವಿಭಜನೆಯನ್ನು ಒಪ್ಪಿಕೊಳ್ಳದಿದ್ದರೆ, ಭಾರತವು ಹಲವಾರು ಭಾಗಗಳಾಗಿ ವಿಭಜನೆಯಾಗುತ್ತದೆ ಮತ್ತು ಸಂಪೂರ್ಣವಾಗಿ ನಾಶವಾಗಬಹುದು ಎಂದು ನಾನು ಭಾವಿಸಿದೆ' ಎಂದು ಸರ್ದಾರ್ ಪಟೇಲ್ ಬರೆದಿದ್ದರು ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಕರ್ನಾಟಕ ಸರ್ಕಾರದ ಹರ್‌ ಘರ್ ತಿರಂಗದ ಜಾಹೀರಾತಿನಲ್ಲಿ ನೆಹರೂ ಅವರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ಕೈಬಿಟ್ಟಿತ್ತು. ಇದರಿಂದ ಕೆರಳಿದ ಕಾಂಗ್ರೆಸ್, ನೆಹರು ಅವರನ್ನು ಹೊರಗಿಟ್ಟಿರುವುದು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುರ್ಚಿ ಉಳಿಸಿಕೊಳ್ಳುವ ಹತಾಶೆಯನ್ನು ಸಾಬೀತುಪಡಿಸುತ್ತದೆ' ಎಂದಿತ್ತು.

SCROLL FOR NEXT