ದೇಶ

'ಸಾಕು ಸಾಕು': ಸರಣಿ ದಾಳಿ ನಂತರ ಕಣಿವೆ ತೊರೆಯುವಂತೆ ಕಾಶ್ಮೀರಿ ಪಂಡಿತರಿಗೆ ಕೆಪಿಎಸ್‌ಎಸ್ ಒತ್ತಾಯ

Lingaraj Badiger

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಉಗ್ರರ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಣಿವೆ ತೊರೆಯುವಂತೆ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ(ಕೆಪಿಎಸ್‌ಎಸ್) ಮಂಗಳವಾರ ಸಮುದಾಯದ ಸದಸ್ಯರಿಗೆ ಒತ್ತಾಯಿಸಿದೆ.

"ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಮತ್ತೊಂದು ಮಾರಣಾಂತಿಕ ದಾಳಿ ನಡೆದಿದ್ದು, ಈ ಮೂಲಕ ಉಗ್ರರು ಕಾಶ್ಮೀರ ಕಣಿವೆಯ ಎಲ್ಲಾ ಪಂಡಿತರನ್ನು ಕೊಲ್ಲುವ ಸಂದೇಶ ರವಾನಿಸಿದ್ದಾರೆ" ಎಂದು ಕೆಪಿಎಸ್ಎಸ್ ಮುಖ್ಯಸ್ಥ ಸಂಜಯ್ ಟಿಕೂ ಅವರು ಹೇಳಿದ್ದಾರೆ.

ಕಣಿವೆಯನ್ನು ತೊರೆದು ಜಮ್ಮು ಮತ್ತು ದೆಹಲಿಯಂತಹ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಲ್ಲಾ ಕಾಶ್ಮೀರಿ ಪಂಡಿತರಿಗೆ ನಾನು ಒತ್ತಾಯಿಸಿದ್ದೇನೆ ಎಂದು ಟಿಕೂ ತಿಳಿಸಿದ್ದಾರೆ.

"ನಾವು ಇದನ್ನು ಕಳೆದ 32 ವರ್ಷಗಳಿಂದ ನೋಡುತ್ತಿದ್ದೇವೆ. ಅಲ್ಪಸಂಖ್ಯಾತರಿಗೆ ಅದರಲ್ಲೂ ಕಾಶ್ಮೀರಿ ಪಂಡಿತರಿಗೆ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ನಾವು ಎಷ್ಟು ದಿನ ಹೀಗೆ ಸಾಯಬೇಕು? ಸಾಕು ಸಾಕು" ಎಂದು ಟಿಕೂ ಅವರು ಪಿಟಿಐಗೆ ತಿಳಿಸಿದ್ದಾರೆ.

ಭಯೋತ್ಪಾದಕರು ಅಲ್ಪಸಂಖ್ಯಾತ ಸಮುದಾಯದ ಮತ್ತಷ್ಟು ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಇಂದು ದಾಳಿಗೀಡಾದ ಸಂತ್ರಸ್ತರು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಎಂದು ಟಿಕೂ ಹೇಳಿದ್ದಾರೆ.

"ಆದರೆ ಅಧಿಕಾರಿಗಳು ನಿಮ್ಮ ಹಳ್ಳಿಗಳಲ್ಲಿ ವಾಸಿಸಬೇಕು ಎಂದು ಅವರಿಗೆ ಹೇಳಿದ್ದು ವಿಪರ್ಯಾಸ. ಇಲ್ಲಿ ಏನು ನಡೆಯುತ್ತಿದೆ? ಅವರು ಸಂಭವನೀಯ ದಾಳಿಗಳ ಬಗ್ಗೆ ಮಾಹಿತಿ ಇದ್ದರೂ ನಮಗೆ ಭದ್ರತೆ ನೀಡುವುದಿಲ್ಲ" ಎಂದು ಆರೋಪಿಸಿದ್ದಾರೆ.

SCROLL FOR NEXT