ದೇಶ

ದಲಿತ ಬಾಲಕನ ಸಾವು: ಸಂಕಷ್ಟಕ್ಕೆ ಸಿಲುಕಿದ ರಾಜಸ್ಥಾನ ಕಾಂಗ್ರೆಸ್‌, 12 ಕೌನ್ಸಿಲರ್‌ಗಳಿಂದ ರಾಜೀನಾಮೆ

Lingaraj Badiger

ಕೋಟಾ: 9 ವರ್ಷದ ದಲಿತ ಬಾಲಕನ ಸಾವಿನಿಂದ ರಾಜಸ್ಥಾನ ಕಾಂಗ್ರೆಸ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕಾಂಗ್ರೆಸ್ ಶಾಸಕನ ರಾಜೀನಾಮೆ ಬೆನ್ನಲ್ಲೇ ಬರಾನ್ ಮುನ್ಸಿಪಲ್ ಕೌನ್ಸಿಲ್‌ನ 12 ಕಾಂಗ್ರೆಸ್ ಕೌನ್ಸಿಲರ್‌ಗಳು ಮಂಗಳವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ನಿನ್ನೆಯಷ್ಟೇ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘವಾಲ್ ಅವರು ಅಶೋಕ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.

ಜಾಲೋರ್‌ನಲ್ಲಿ ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಶಾಲಾ ಶಿಕ್ಷಕರಿಂದ ತೀವ್ರ ಹಲ್ಲೆಗೊಳಗಾಗಿದ್ದ ದಲಿತ ಬಾಲಕನ ಸಾವಿನ ಎರಡು ದಿನಗಳ ನಂತರ ಬರನ್-ಅತ್ರು ಕ್ಷೇತ್ರದ ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘವಾಲ್ ಅವರು ರಾಜೀನಾಮೆ ನೀಡಿದ್ದರು.

ಏತನ್ಮಧ್ಯೆ, ಶಾಸಕರನ್ನು ಬೆಂಬಲಿಸಿ, ಬರಾನ್ ನಾಗರಿಕ ಮಂಡಳಿಯ 25 ಕಾಂಗ್ರೆಸ್ ಕೌನ್ಸಿಲರ್‌ಗಳ ಪೈಕಿ 12 ಕೌನ್ಸಿಲರ್ ಗಳು ದಲಿತರು ಮತ್ತು ವಂಚಿತ ವರ್ಗಗಳ ಮೇಲಿನ ದೌರ್ಜನ್ಯ ಖಂಡಿಸಿ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ಮತ್ತು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಇಂದು ಜಲೋರ್‌ಗೆ ತೆರಳಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿದ್ದರು ಮತ್ತು ದಲಿತ ಸಮುದಾಯದ ನಂಬಿಕೆಯನ್ನು ಗೆಲ್ಲಲು ಬಲವಾದ ಸಂದೇಶ ನೀಡಬೇಕಾಗಿದೆ ಎಂದು ಹೇಳಿದ್ದರು.

SCROLL FOR NEXT