ದೇಶ

ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್, ಏಳು ಐಟಿಬಿಪಿ ಸಿಬ್ಬಂದಿ ಸಾವು, 32 ಮಂದಿಗೆ ಗಾಯ

Lingaraj Badiger

ಶ್ರೀನಗರ: ಅಮರನಾಥ ಯಾತ್ರೆಯ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದ ಭದ್ರತಾ ಸಿಬ್ಬಂದಿಯ ಬಸ್ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಆಳವಾದ ಕಂದಕಕ್ಕೆ ಬಿದ್ದಿದ್ದು, ಭೀಕರ ಅಪಘಾತದಲ್ಲಿ ಏಳು ಐಟಿಬಿಪಿ ಯೋಧರು ಹುತಾತ್ಮರಾಗಿದ್ದಾರೆ ಮತ್ತು 32 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

37 ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಪ್ರಯಾಣಿಸುತ್ತಿದ್ದ ಬಸ್ ಚಂದನ್ವಾರಿಯಿಂದ ಇಲ್ಲಿನ ಪೊಲೀಸ್ ನಿಯಂತ್ರಣ ಕೊಠಡಿಗೆ ತೆರಳುತ್ತಿತ್ತು ಎಂದು ಅವರು ಹೇಳಿದ್ದಾರೆ.

ಘಟನೆಯಲ್ಲಿ ಇಬ್ಬರು ಐಟಿಬಿಪಿ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಐವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಎಂಟು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ವಿಶೇಷ ಚಿಕಿತ್ಸೆಗಾಗಿ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ. ಉಳಿದ ಗಾಯಾಳುಗಳಿಗೆ ಅನಂತನಾಗ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಅವರು ಅಪಘಾತದಲ್ಲಿ ಮೃತಪಟ್ಟ ಯೋಧರಿಗೆ ಸಂತಾಪ ಸೂಚಿಸಿದ್ದಾರೆ.

SCROLL FOR NEXT