ದೇಶ

ಲಖಿಂಪುರ ಖೇರಿ: ಅಧಿಕಾರಿಗಳ ಭೇಟಿ ಬಳಿಕ ರೈತರ ಪ್ರತಿಭಟನೆ ಅಂತ್ಯ, ದೆಹಲಿಯಲ್ಲಿ ಎಸ್‌ಕೆಎಂ ಸಭೆ

Lingaraj Badiger

ಲಖೀಂಪುರ ಖೇರಿ: ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾಗೊಳಿಸುವುದು ಮತ್ತು ಎಂಎಸ್‌ಪಿ ಖಾತರಿಪಡಿಸುವ ಕಾನೂನು ಜಾರಿಗೆ ಒತ್ತಾಯಿಸಿ ರೈತರು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಶನಿವಾರ ಅಂತ್ಯವಾಗಿದೆ.

ಜಿಲ್ಲೆಯ ಉನ್ನತ ಅಧಿಕಾರಿಗಳು ಪ್ರತಿಭಟನಾಕಾರರನ್ನು ಭೇಟಿ ಮಾಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್ ಅವರು ತಿಳಿಸಿದ್ದಾರೆ.

ರೈತರನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್, ಸೆಪ್ಟೆಂಬರ್ 6 ರಂದು ದೆಹಲಿಯಲ್ಲಿ ನಡೆಯುವ ಎಸ್ ಕೆಎಂ ಸಭೆಯಲ್ಲಿ ಮುಂದಿನ ಕಾರ್ಯತಂತ್ರವನ್ನು ವಿವರಿಸಲಾಗುವುದು ಎಂದು ಹೇಳಿದ್ದಾರೆ.

ಇಂದು ಮಧ್ಯಾಹ್ನ 2.30ರ ಸುಮಾರಿಗೆ ಜಿಲ್ಲಾಧಿಕಾರಿ ಮಹೇಂದ್ರ ಬಹದ್ದೂರ್ ಸಿಂಗ್ ಹಾಗೂ ಇತರರು ಧರಣಿ ಸ್ಥಳಕ್ಕೆ ಆಗಮಿಸಿ ರೈತರಿಂದ ಮನವಿ ಪತ್ರ ಸ್ವೀಕರಿಸಿದರು.

75 ಗಂಟೆಗಳ ಕಾಲ ನಡೆದ ಧರಣಿಯನ್ನು ಟಿಕಾಯತ್ ಮತ್ತು ಇತರ ರೈತ ಮುಖಂಡರು ಅಂತ್ಯಗೊಳಿಸುವ ಮುನ್ನ ಸೆಪ್ಟೆಂಬರ್ ಮೊದಲ ವಾರದಲ್ಲಿ ರೈತರಿಗಾಗಿ ಸರ್ಕಾರದ ಮಟ್ಟದಲ್ಲಿ ಸಭೆ ಏರ್ಪಡಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಲಖಿಂಪುರ ಖೇರಿಯಲ್ಲಿ ರೈತರ ಪ್ರತಿಭಟನೆ ವೇಳೆ ನಾಲ್ವರು ರೈತರು ಸೇರಿದಂತೆ ಎಂಟು ಮಂದಿಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು.

SCROLL FOR NEXT