ದೇಶ

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ, ಪಂಜಾಬ್ ನಲ್ಲಿ ಬಿಗಿ ಭದ್ರತೆ 

Nagaraja AB

ಮೊಹಾಲಿ: ಇದೇ ತಿಂಗಳ 24 ರಂದು ಪ್ರಧಾನಿ ನರೇಂದ್ರ ಮೋದಿ ಮೊಹಾಲಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್  ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮೊಹಾಲಿಯ ಮುಲಾನ್ ಪುರದಲ್ಲಿ ನಿರ್ಮಾಣವಾಗಿರುವ ಹೋಮಿ ಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಮೊಹಾಲಿಯಲ್ಲಿ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. 

ಆಗಸ್ಟ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಭದ್ರತೆ ಕೈಗೊಂಡಿದ್ದು,  ಎಲ್ಲಾ ವಾಹನಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಮೊಹಾಲಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಎಚ್ಎಸ್ ಮಾನ್ ಹೇಳಿದರು. ಇದಲ್ಲದೆ, ಜಿಲ್ಲೆಯ ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ ತಪಾಸಣೆ  ಮಾಡಲಾಗುತ್ತಿದೆ ಎಂದು ಮಾನ್ ಹೇಳಿದ್ದಾರೆ.

ಸಾರ್ವಜನಿಕ ಸಾರಿಗೆ ವಾಹನಗಳು ಮತ್ತು ಗಡಿಯಿಂದ ಜಿಲ್ಲೆಗೆ ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸಲು ಪೊಲೀಸರನ್ನು ನಿಯೋಜಿಸಲಾಗಿತ್ತು. ರಾಜ್ಯದ ಗಡಿಯಲ್ಲಿ ವಾಹನಗಳ ತಪಾಸಣೆ  ಮಾಡುತ್ತಿದ್ದು, ಸಮಾಜಘಾತುಕರನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ  ಎಂದು ಅವರು ತಿಳಿಸಿದ್ದಾರೆ.

ಚಂಡೀಗಢದಲ್ಲೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಭಾನುವಾರ ಸೆಕ್ಟರ್ 43 ಮತ್ತು ಸೆಕ್ಟರ್ 17 ರ ಅಂತರ-ರಾಜ್ಯ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಸಾರಿಗೆ ವಾಹನಗಳ ತೀವ್ರ ತಪಾಸಣೆ ನಡೆಸಿದರು. ಅಲ್ಲದೆ, ನಗರದ ಇತರ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ನಗರದ ಶಾಪಿಂಗ್ ಮಾಲ್‌ಗಳು ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಭದ್ರತೆಯನ್ನು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT