ದೇಶ

ಉತ್ತರ ಪ್ರದೇಶ: ಕಾಲೇಜ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ತೆಗೆದು ಬಿಜೆಪಿ ನಾಯಕರ ಫೋಟೋ

Lingaraj Badiger

ಶಹಜಹಾನ್‌ಪುರ: ಗುರುಕುಲ ಸಂಸ್ಕೃತ ಮಹಾವಿದ್ಯಾಲಯದ ಪ್ರವೇಶದ್ವಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳನ್ನು ತೆಗೆದುಹಾಕಿ ಆ ಜಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಥಳೀಯ ಬಿಜೆಪಿ ನಾಯಕರ ಚಿತ್ರಗಳನ್ನು ಹಾಕಲಾಗಿದೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರ ಸತ್ಯದೇವ್ ಶಾಸ್ತ್ರಿ ಅವರ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.

ತಿಲ್ಹಾರ್‌ನ ಬಿಜೆಪಿ ಶಾಸಕಿ ಸಲೋನಾ ಕುಶ್ವಾಹಾ ಅವರ ಸೂಚನೆಯ ಮೇರೆಗೆ ಈ ಫಲಕವನ್ನು ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರದ ಜತೆ ಬಿಜೆಪಿ ಶಾಸಕಿಯ ಫೋಟೋ ಸಹ ಇದೆ.

‘ಶಾಸಕರ ಚಿತ್ರವಿರುವ ಬೋರ್ಡ್ ಅನ್ನು ತೆಗೆದು ಮೂಲ ಬೋರ್ಡ್ ಹಾಕುವಂತೆ ಒತ್ತಾಯಿಸಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರ ಸತ್ಯದೇವ್ ಶಾಸ್ತ್ರಿ ಅವರ ಸಂಬಂಧಿಕರು ಪ್ರತಿಭಟನೆ ನಡೆಸಿದರು ಎಂದು ಗುರುಕುಲ ಕಾಲೇಜಿನ ಪ್ರಾಂಶುಪಾಲೆ ಧರ್ನಾ ಯಾಗಿಕಿ ಅವರು ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.

ಇನ್ನು ಪ್ರತಿಭಟನೆಯ ನಂತರ ತಾವು ಕಾಲೇಜಿಗೆ ತೆರಳಿ ತಮ್ಮ ಬೋರ್ಡ್ ಬದಲಾಯಿಸಿರುವುದಾಗಿ ಶಾಸಕಿ ಕುಶ್ವಾಹಾ ಅವರು ಹೇಳಿದ್ದಾರೆ. ಅಲ್ಲದೆ ಇದು ಇದು ತಮ್ಮ ವಿರೋಧಿಗಳ ಪಿತೂರಿ ಎಂದು ಆರೋಪಿಸಿದ್ದಾರೆ.

ಮೂಲ ಫಲಕವನ್ನು ಹಾಕಿದ ನಂತರ ಪ್ರತಿಭಟನೆ ಹಿಂಪಡೆಯಲಾಗಿದೆ.

SCROLL FOR NEXT