ದೇಶ

ಪ್ರವಾದಿ ವಿರುದ್ಧ ಹೇಳಿಕೆ: ಬಿಜೆಪಿಯಿಂದ ಅಮಾನತುಗೊಂಡ ತೆಲಂಗಾಣ ಶಾಸಕ ರಾಜಾ ಸಿಂಗ್ ಬಿಡುಗಡೆ!

Ramyashree GN

ಹೈದರಾಬಾದ್: ಪ್ರವಾದಿ ಮೊಹಮ್ಮದ್ ಅವರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಕೆಲವೇ ಗಂಟೆಗಳ ನಂತರ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಮಂಗಳವಾರ ಸಂಜೆ ಬಿಡುಗಡೆಯಾಗಿದ್ದಾರೆ.

ಶಾಸಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು 14 ದಿನಗಳ ಕಸ್ಟಡಿಗೆ ಕೋರಿದರು. ಆದರೆ, 14 ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನೋಟಿಸ್ ನೀಡದಿರುವಂತಹ ಕಾರ್ಯವಿಧಾನದ ಲೋಪಗಳನ್ನು ಉಲ್ಲೇಖಿಸಿ, ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿತು.

ಬಂಧನಕ್ಕೂ ಮುನ್ನ ಆರೋಪಿಗೆ ಸಿಆರ್‌ಪಿಸಿ 41(ಎ) ಅಡಿಯಲ್ಲಿ ಪೊಲೀಸರು ನೋಟಿಸ್‌ ನೀಡಿಲ್ಲ ಎಂಬ ರಾಜಾ ಸಿಂಗ್‌ ಅವರ ವಕೀಲರ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ.

ಏಳು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಪಡುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಬಂಧನಕ್ಕೂ ಮುನ್ನವೇ ನೋಟಿಸ್ ಜಾರಿ ಮಾಡಬೇಕೆಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪೊಲೀಸರು ಪಾಲಿಸಿಲ್ಲ ಎಂದು ರಾಜಾ ಸಿಂಗ್ ಪರ ವಕೀಲರು ಸುದ್ದಿಗಾರರಿಗೆ ತಿಳಿಸಿದರು.

ರಾಜಾ ಸಿಂಗ್ ಪರ ಮತ್ತು ವಿರೋಧ ಜನರು ಜಮಾಯಿಸಿ ಘೋಷಣೆ ಕೂಗಿದ್ದರಿಂದ ನ್ಯಾಯಾಲಯದಲ್ಲಿ ಕೆಲಕಾಲ ಉದ್ವಿಗ್ನತೆ ಉಂಟಾಗಿತ್ತು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಆದರೆ, ಶಾಸಕರ ವಿರುದ್ಧ ಇನ್ನೂ ಹಲವು ಪ್ರಕರಣಗಳು ದಾಖಲಾಗಿರುವುದರಿಂದ ಪೊಲೀಸರು ಸೂಕ್ತ ಕ್ರಮ ಅನುಸರಿಸಿ ಮತ್ತೆ ಬಂಧಿಸುವ ಸಾಧ್ಯತೆ ಇದೆ. ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಕೂಡ ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿ ಅಮಾನತುಗೊಂಡಿದ್ದಾರೆ.

ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಅವರನ್ನು ಅಮಾನತುಗೊಳಿಸಿ, ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ತಮ್ಮನ್ನು ಏಕೆ ಉಚ್ಚಾಟಿಸಬಾರದು ಎಂಬುದನ್ನು 10 ದಿನಗಳೊಳಗೆ ವಿವರಿಸುವಂತೆ  ಕೇಳಿದೆ.

ರಾಜಾ ಸಿಂಗ್ ಅವರ ಬಿಡುಗಡೆಯ ನಂತರ, ಮಂಗಳವಾರ ತಡರಾತ್ರಿ ನಗರದಾದ್ಯಂತ ಪ್ರತಿಭಟನೆಗಳು ನಡೆದವು ಮತ್ತು ಭಾರಿ ಜನಸಮೂಹ ಸೇರಿತು. ಚಾರ್ಮಿನಾರ್, ಬಹದ್ದೂರ್‌ಪುರ ಮತ್ತು ಕಿಶನ್‌ಬಾಗ್‌ನಂತಹ ಕೆಲವು ಸ್ಥಳಗಳಲ್ಲಿ ಪೊಲೀಸ್ ಗಸ್ತು ವಾಹನಗಳಿಗೆ ಹಾನಿಯುಂಟಾಯಿತು.

SCROLL FOR NEXT