ದೇಶ

ಸಿಬಿಐ ಅಧಿಕಾರಿಗಳು 14 ಗಂಟೆ ದಾಳಿ ಮಾಡಿ ನನ್ನ ಬಟ್ಟೆ, ಮಕ್ಕಳ ಬಟ್ಟೆಗಳನ್ನೂ ಶೋಧ ಮಾಡಿದ್ದಾರೆ, ಆದರೆ ಅವರಿಗೆ ಏನೂ ಸಿಗಲಿಲ್ಲ: ಮನೀಶ್ ಸಿಸೋಡಿಯಾ

Sumana Upadhyaya

ನವದೆಹಲಿ: ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ "ಸಂಪೂರ್ಣವಾಗಿ ನಕಲಿ" ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶುಕ್ರವಾರ ಆರೋಪಿಸಿದ್ದಾರೆ. ಬಿಜೆಪಿ ಆಡಳಿತದ ಕೇಂದ್ರವು ರಾಜ್ಯ ಸರ್ಕಾರಗಳನ್ನು ತೊಡೆದುಹಾಕಲು ಸರಣಿ ಹಂತಕನಂತೆ ವರ್ತಿಸುತ್ತಿದೆ ಎಂದು ಕೂಡ ಟೀಕಿಸಿದ್ದಾರೆ. 

ಇಂದು ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಸಿಸೋಡಿಯಾ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು, ಇತರರು ಮಾಡುವ ಒಳ್ಳೆಯ ಕೆಲಸಗಳನ್ನು ನೋಡಿ ಪ್ರಧಾನಿಯವರಿಗೆ ಅಸುರಕ್ಷತೆ ಭಾವನೆ ಕಾಡುತ್ತಿದೆ ಎಂದಿದ್ದಾರೆ.

ಪ್ರಧಾನಿ ಮೋದಿಯವರು ಇತರರ ಒಳ್ಳೆಯ ಕೆಲಸಗಳನ್ನು ನೋಡಿ ಅಸುರಕ್ಷಿತರಾಗುತ್ತಾರೆ, ಅವರಿಗಿಂತ ಹೆಚ್ಚು ಅಸುರಕ್ಷಿತ ವ್ಯಕ್ತಿಯನ್ನು ನಾನು ಇದುವರೆಗೆ ನೋಡಿಲ್ಲ, ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಯಾಗಿದ್ದಿದ್ದರೆ, ನಾನು ಬೇರೆ ಸರ್ಕಾರದಲ್ಲಿ ಶಿಕ್ಷಣ ಸಚಿವನಾಗಿದ್ದರೆ ಅವರು ಈ ರೀತಿ ಮಾಡುತ್ತಿರಲಿಲ್ಲ ಎಂದು ಕೂಡ ಸಿಸೋಡಿಯಾ ಹೇಳಿದ್ದಾರೆ. 

ಕೇಂದ್ರದ ಎಲ್ಲಾ ಉತ್ತಮ ಕೆಲಸ ಕಾರ್ಯಗಳಿಗೆ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಯನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಪ್ರಧಾನಿ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದರು. 

ಬಟ್ಟೆಯನ್ನು ಕೂಡ ಬಿಟ್ಟಿಲ್ಲ: ತಮ್ಮ ಮನೆಗೆ ಬಂದ ಸಿಬಿಐ ಅಧಿಕಾರಿಗಳು ಸತತ 14 ಗಂಟೆಗಳ ಶೋಧ ನಡೆಸಿದ್ದಾರೆ. ಈ ವೇಳೆ ತಮ್ಮ ಬಟ್ಟೆ ಮತ್ತು ಮಕ್ಕಳ ಬಟ್ಟೆಗಳನ್ನು ಸಹ ಶೋಧಿಸುವುದನ್ನು ಬಿಡಲಿಲ್ಲ ಎಂದರು. 

“ನನ್ನ ವಿರುದ್ಧದ ಎಫ್‌ಐಆರ್ ಸಂಪೂರ್ಣ ನಕಲಿ, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಬಿಜೆಪಿಯವರು ಇತರ ಪಕ್ಷಗಳ ಆಡಳಿತವಿರುವ ರಾಜ್ಯ ಸರ್ಕಾರಗಳನ್ನು ತೊಡೆದುಹಾಕಲು ಸರಣಿ ಹಂತಕರಂತೆ ವರ್ತಿಸುತ್ತಿದ್ದಾರೆ, ರಾಜ್ಯ ಸರ್ಕಾರಗಳನ್ನು ಕೊಲ್ಲಲು ಅವರು ಹಾಕುತ್ತಿರುವ ಶ್ರಮವನ್ನು ಆಸ್ಪತ್ರೆ, ಶಾಲೆ ನಿರ್ಮಾಣದಂತಹ ಮೂಲಭೂತ ಸೌಕರ್ಯಗಳಿಗೆ ನೀಡಿದರೆ ಈ ದೇಶ ಉದ್ಧಾರವಾಗಬಹುದು'' ಎಂದರು. 

ತಮ್ಮ ಸರ್ಕಾರದ ಅಬಕಾರಿ ನೀತಿ 2021-22 ಅನ್ನು ಸಮರ್ಥಿಸಿಕೊಂಡ ಸಿಸೋಡಿಯಾ ಅದನ್ನೀಗ ಹಿಂತೆಗೆದುಕೊಳ್ಳಲಾಗಿದೆ. ಅಬಕಾರಿ ನೀತಿಯಲ್ಲಿ ಜನರ ಮೇಲೆ ಯಾವುದೇ ಹೊರೆ ಇಲ್ಲ. ಸರ್ಕಾರದ ಆದಾಯವೂ ಹೆಚ್ಚಾಯಿತು, ಆದರೆ ಬಿಜೆಪಿ ಅದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿದೆ ಎಂದರು.

SCROLL FOR NEXT