ದೇಶ

ಸೋನಾಲಿ ಫೋಗಟ್ ಗೆ ಸಾಯುವ ಮುನ್ನ ಬಲವಂತವಾಗಿ ಡ್ರಗ್ಸ್ ನೀಡಲಾಗಿದೆ: ಗೋವಾ ಪೊಲೀಸರು

Lingaraj Badiger

ಗೋವಾ: ನಿಗೂಢವಾಗಿ ಮೃತಪಟ್ಟ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರಿಗೆ ಅವರ ಇಬ್ಬರು ಸಹಚರರು ಪಾರ್ಟಿಯಲ್ಲಿ ಬಲವಂತವಾಗಿ ಡ್ರಗ್ಸ್ ನೀಡಿದ್ದಾರೆ ಎಂದು ಗೋವಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

"ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಸುಧೀರ್ ಸಂಗ್ವಾನ್ ಮತ್ತು ಆತನ ಸಹಚರ ಸುಖ್ವಿಂದರ್ ಸಿಂಗ್ ಅವರು ಕ್ಲಬ್‌ನಲ್ಲಿ ಸೋನಾಲಿ ಜೊತೆ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಅವರಲ್ಲಿ ಒಬ್ಬರು ಬಿಜೆಪಿ ನಾಯಕಿಗೆ ಮಾದಕ ದ್ರವ್ಯ ಸೇವಿಸುವಂತೆ ಬಲವಂತ ಮಾಡಿರುವುದು ವಿಡಿಯೋದಲ್ಲಿ ದೃಢಪಟ್ಟಿದೆ" ಎಂದು ಪೊಲೀಸ್ ಮಹಾನಿರೀಕ್ಷಕ ಓಮ್ವಿರ್ ಸಿಂಗ್ ಬಿಷ್ಣೋಯ್ ಅವರು ಹೇಳಿದ್ದಾರೆ.

ಆರೋಪಿಗಳಾದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಆಗಸ್ಟ್ 22 ರಂದು ಫೋಗಟ್ ಜೊತೆಗೆ ಗೋವಾಗೆ ಪ್ರಯಾಣ ಬೆಳೆಸಿದ್ದರು.

ಸೋನಾಲಿ ಪೋಗಟ್‌ ಸಾಯುವ ಹಿಂದಿನ ದಿನ ರಾತ್ರಿ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಬಲವಂತದಿಂದ ಮಾದಕ ವಸ್ತು ನೀಡಲಾಗಿದೆ, ಇದೇ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಗೋವಾ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ. 

"ವಿಚಾರಣೆ ವೇಳೆ ಸುಖ್ವಿಂದರ್ ಮತ್ತು ಸುಧೀರ್ ಅವರು ಉದ್ದೇಶಪೂರ್ವಕವಾಗಿ ಯಾವುದೋ ಒಂದು ರಾಸಾಯನಿಕವನ್ನು ಬೆರೆಸಿ ಸೋನಾಲಿ ಫೋಗಟ್ ಅವರಿಗೆ ಕುಡಿಯುವಂತೆ ಬಲವಂತ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ" ಎಂದು ಐಜಿಪಿ ಓಮ್ವಿರ್ ಸಿಂಗ್ ಬಿಷ್ಣೋಯ್ ತಿಳಿಸಿದ್ದಾರೆ.

ಇಬ್ಬರು ಆರೋಪಿಗಳಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಅವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಗೋವಾ ಪೊಲೀಸರು ಹೇಳಿದ್ದಾರೆ.

SCROLL FOR NEXT