ದೇಶ

ಡಿಸೆಂಬರ್ 7 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: ನಾಳೆ ಉನ್ನತ ಕಾಂಗ್ರೆಸ್ ನಾಯಕರ ಸಭೆ

Nagaraja AB

ನವದೆಹಲಿ: ಡಿಸೆಂಬರ್ 7 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ನಾಳೆ ಕಾಂಗ್ರೆಸ್ ಉನ್ನತ ಮಟ್ಟದ ನಾಯಕರು ಸಭೆ ನಡೆಸಲಿದ್ದಾರೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ನಿವಾಸದಲ್ಲಿ ನಾಳೆ ಸಂಜೆ ನಡೆಯಲಿರುವ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಪಕ್ಷದ ಮುಖ್ಯ ಸಚೇತಕರಾದ ಜೈರಾಂ ರಮೇಶ್, ಕೆ. ಸುರೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. 

ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥರಾಗಿರುವ ಸೋನಿಯಾ ಗಾಂಧಿ ಅವರ ನಿವಾಸದ ಜನಪಥ್ 10ರಲ್ಲಿ ನಡೆಯಲಿರುವ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಮನೀಶ್ ತಿವಾರಿ ಭಾಗವಹಿಸುವ ನಿರೀಕ್ಷೆಯಿದೆ.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದ್ದು, ಆಡಳಿತಾರೂಢ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ಕಾರ್ಯತಂತ್ರ ಕುರಿತು ಮುಖಂಡರು ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ವಿಪಕ್ಷ ನಾಯಕರಾಗಿ ಮುಂದುವರೆಯುವ ಸಾಧ್ಯತೆಯಿದೆ. ಆದರೆ, ಹೀಗಾದಲ್ಲಿ ರಾಹುಲ್ ಗಾಂಧಿ ಜೈಪುರ ಅಧಿವೇಶನದಲ್ಲಿ ಹೇಳಿದ ಒಬ್ಬರಿಗೆ ಒಂದು ಹುದ್ದೆ ನಿಯಮಕ್ಕೆ ವಿರುದ್ಧವಾಗಲಿದ್ದು, ಈ ಬಗ್ಗೆಯೂ ನಾಳಿನ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.

SCROLL FOR NEXT