ದೇಶ

ಪ್ರತಿಯೊಬ್ಬರಿಗೂ ತಮ್ಮ ಮತ, ಧರ್ಮ ಅನುಸರಿಸಲು ಹಕ್ಕಿದೆ: ಸುಪ್ರೀಂ ಕೋರ್ಟ್

Srinivas Rao BV

ನವದೆಹಲಿ: ಭಾರತ ಮತ ನಿರಪೇಕ್ಷ ದೇಶವಾಗಿದ್ದು ಪ್ರತಿಯೊಬ್ಬರಿಗೂ ತಮ್ಮ ತಮ್ಮ ಮತಗಳನ್ನು ಅನುಸರಿಸುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಠಾಕೂರ್ ಅನುಕುಲ್ ಚಂದ್ರ ಅವರನ್ನು ಪರಮಾತ್ಮ ಎಂದು ಘೋಷಿಸಬೇಕು ಎಂದು ಕೋರಿದ್ದ ಪಿಐಎಲ್ ನ್ನು ವಜಾಗೊಳಿಸಿರುವ ವೇಳೆ ಸುಪ್ರೀಂ ಕೋರ್ಟ್ ಈ ರೀತಿಯ ಹೇಳಿಕೆ ನೀಡಿದೆ.

ನ್ಯಾ.ಎಂ ಆರ್ ಷಾ ಹಾಗೂ ನ್ಯಾ. ಸಿಟಿ ರವಿಕುಮಾರ್ ಅರ್ಜಿದಾರರಿಗೆ ಪ್ರಚಾರದ ಆಸಕ್ತಿ ಹೊಂದಿರುವ ವ್ಯಾಜ್ಯವನ್ನು ಕೋರ್ಟ್ ಗೆ ಎಳೆದುತಂದಿದ್ದಕ್ಕಾಗಿ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಅರ್ಜಿದಾರ ಉಪೇಂದ್ರ ನಾಥ್ ದಲೈ ಅವರು ತಮ್ಮ ಅರ್ಜಿಯನ್ನು ಓದಲು ಪ್ರಾರಂಭಿಸಿದ ಬೆನ್ನಲ್ಲೇ ನ್ಯಾಯಪೀಠ, ಅರ್ಜಿದಾರರ ಕುರಿತು, ನಿಮ್ಮ ಉಪನ್ಯಾಸ ಕೇಳಲು ನಾವು ಇಲ್ಲಿ ಇಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೇ? ಅದು ಹೇಗೆ ಆಗುತ್ತದೆ? ಪ್ರತಿಯೊಬ್ಬರಿಗೂ ಅವರ ಮತವನ್ನು ಅನುಸರಿಸಲು ಹಕ್ಕಿದೆ. ನಿರ್ದಿಷ್ಟ ಮತವನ್ನು ಅನುಸರಿಸಿ ಎಂದು ಜನಕ್ಕೆ ಹೇಳುವುದಕ್ಕೆ ಹೇಗೆ ಸಾಧ್ಯ? ನಿಮಗೆ ಬೇಕಾದಲ್ಲಿ ನೀವು ಅವರನ್ನು ಪರಮಾತ್ಮ ಎಂದು ಪರಿಗಣಿಸಿ, ಅದನ್ನು ಬೇರೆಯವರ ಮೇಲೇಕೆ ಹೇರುತ್ತಿದ್ದೀರಿ? ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರಶ್ನಿಸಿದೆ.

ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯವೆಂದರೆ ಇತರರನ್ನು ಮತಾಂತರ ಮಾಡುವ ಹಕ್ಕು ಅಲ್ಲ: ಸುಪ್ರೀಂ ಗೆ ಕೇಂದ್ರ
 
"ಭಾರತ ಮತನಿರಪೇಕ್ಷ ದೇಶವಾಗಿದೆ, ಅರ್ಜಿದಾರರಿಗೆ ಠಾಕೂರ್ ಅನುಕುಲ್ ಚಂದ್ರ ಅವರನ್ನು ಇಡೀ ದೇಶದ ಜನತೆ ಪರಮಾತ್ಮ ಎಂದು ಅಂಗೀಕರಿಸುವಂತೆ ಮನವಿ ಮಾಡುವುದಕ್ಕೆ ಅವಕಾಶವಿಲ್ಲ. ಇದು ಪ್ರಚಾರಕ್ಕಾಗಿ ಹಾಕಲಾಗಿರುವ ಅರ್ಜಿ ಎಂದೆನಿಸುತ್ತದೆ, ಇದು ದಂಡದ ಸಹಿತ ವಿಲೇವಾರಿ ಮಾಡುವುದಕ್ಕೆ ಯೋಗ್ಯವಷ್ಟೇ" ಎಂದು ನ್ಯಾಯಪೀಠ ಹೇಳಿದೆ. ಠಾಕೂರ್ ಅನುಕುಲ್ ಚಂದ್ರ ಸೆ.14, 1888 ರಲ್ಲಿ ಬಾಂಗ್ಲಾದೇಶದ ಪಬ್ನದಲ್ಲಿ ಜನಿಸಿದ್ದರು.

SCROLL FOR NEXT