ದೇಶ

ಬೆಳಗಾವಿ ಗಡಿ ವಿವಾದ ತೀವ್ರ: ಪೊಲೀಸರ ಎಚ್ಚರಿಕೆ, ಕರ್ನಾಟಕಕ್ಕೆ ಬಸ್ಸು ಸಂಚಾರ ರದ್ದುಗೊಳಿಸಿದ ಮಹಾರಾಷ್ಟ್ರ

Sumana Upadhyaya

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ವಿವಾದ ತಾರಕಕ್ಕೇರುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮ(MSRTC) ಕರ್ನಾಟಕಕ್ಕೆ ಬಸ್ ಸೇವೆಯನ್ನು ರದ್ದುಗೊಳಿಸಿದೆ. 

ಪ್ರಯಾಣಿಕರು ಮತ್ತು ಬಸ್ಸಿನ ಸುರಕ್ಷತೆ ಮತ್ತು ಭದ್ರತೆಯನ್ನು ನೋಡಿಕೊಂಡು ಪೊಲೀಸರ ಜೊತೆ ಪರಿಶೀಲಿಸಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಬೆಳಗಾವಿಯಲ್ಲಿ ಮತ್ತು ಗಡಿಭಾಗದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿರುವುದರಿಂದ ಮಹಾರಾಷ್ಟ್ರದ ಬಸ್ಸುಗಳ ಮೇಲೆ ಕನ್ನಡಿಗರು, ಕನ್ನಡಪರ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇಂದು ಈ ತೀರ್ಮಾನ ಕೈಗೊಂಡಿದೆ.

ಪೊಲೀಸರಿಂದ ಸಂಚಾರಕ್ಕೆ ಅನುಮತಿ ಸಿಕ್ಕಿದ ನಂತರ ಕರ್ನಾಟಕಕ್ಕೆ ಬಸ್ಸು ಸಂಚಾರ ಸೇವೆ ಆರಂಭಿಸಲಾಗುವುದು. ಪ್ರಯಾಣಿಕರ ಮತ್ತು ಬಸ್ಸುಗಳ ಸುರಕ್ಷತೆ ನಮಗೆ ಮುಖ್ಯವಾಗಿದೆ ಎಂದು ಮಹಾರಾಷ್ಟ್ರ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಗಡಿ ವಿವಾದ ಕುರಿತು ಚರ್ಚೆ ನಡೆಸುವುದಾಗಿ ಹೇಳಿದ್ದರು. ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ನಿನ್ನೆ ನಡೆದ ಘಟನೆ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆ ಮಾತನಾಡಿದ್ದೇನೆ. ಶರದ್ ಪವಾರ್ ಅವರು ಕರ್ನಾಟಕಕ್ಕೆ ಹೋಗುವ ಅವಶ್ಯಕತೆಯಿಲ್ಲ. ಗಡಿ ವಿವಾದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತನಾಡುತ್ತೇನೆ. ಅವರು ಈ ಬಗ್ಗೆ ಗಮನ ಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದರು.

SCROLL FOR NEXT