ದೇಶ

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಮಹಾರಾಷ್ಟ್ರದಲ್ಲಿ ಕರ್ಣಾಟಕ ಬ್ಯಾಂಕ್‌ನ ನಾಮಫಲಕ ವಿರೂಪ

Ramyashree GN

ನಾಸಿಕ್: ಉಭಯ ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆ ಮಹಾರಾಷ್ಟ್ರದ ನಾಸಿಕ್ ನಗರದ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಸ್ವರಾಜ್ಯ ಸಂಘಟನೆ ಕಾರ್ಯಕರ್ತರು ಬುಧವಾರದಂದು ಬ್ಯಾಂಕ್‌ನ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿಸಿದ್ದಾರೆ.

ಬ್ಯಾಂಕಿನ ಶಟರ್ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಸಂಭಾಜಿರಾಜೆ ಭೋಸಲೆ ಛತ್ರಪತಿಯವರು ಸ್ವರಾಜ್ಯ ಸಂಘಟನೆಯನ್ನು ಸ್ಥಾಪಿಸಿದರು.

ಕರ್ಣಾಟಕ ಬ್ಯಾಂಕ್‌ನ ಕೆನಡಾ ಕಾರ್ನರ್ ಶಾಖೆಯಲ್ಲಿ ಬೆಳಿಗ್ಗೆ 20ಕ್ಕೂ ಹೆಚ್ಚು ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಕೇಸರಿ ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು.

'ಮಹಾರಾಷ್ಟ್ರದ ವಾಹನಗಳಿಗೆ ಹಾನಿ ಮಾಡುವ ಮೂಲಕ ಕರ್ನಾಟಕದಲ್ಲಿನ ಸಂಘಟನೆಗಳು ಏನಾದರೂ ದೊಡ್ಡದನ್ನು ಸಾಧಿಸಿದ್ದೇವೆ ಎಂದು ಭಾವಿಸಿದರೆ, ನಾವು ಕರ್ನಾಟಕದಿಂದ ಒಂದು ವಾಹನವನ್ನು ಸಹ ಮಹಾರಾಷ್ಟ್ರಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಅವರಿಗೆ ಎಚ್ಚರಿಕೆ ನೀಡುತ್ತೇವೆ. ಕರ್ನಾಟಕದವರು ಇಲ್ಲಿ ವ್ಯಾಪಾರ ಮಾಡಲು ಬಿಡುವುದಿಲ್ಲ' ಎಂದು ಸ್ವರಾಜ್ಯ ಸಂಘಟನೆಯ ವಕ್ತಾರ ಕರಣ್ ಗಾಯ್ಕರ್ ಹೇಳಿದ್ದಾರೆ.

ಕರ್ನಾಟಕದ ಬೆಳಗಾವಿ ಜಿಲ್ಲೆಯ ಹಿರೇಬೌಗವಾಡಿಯ ಟೋಲ್ ಬೂತ್ ಬಳಿ ಮಹಾರಾಷ್ಟ್ರ ಕಡೆಯಿಂದ ಕರ್ನಾಟಕಕ್ಕೆ ಪ್ರವೇಶಿಸುವ ವಾಹನಗಳ ಮೇಲೆ ಕಲ್ಲು ತೂರಾಟದ ಮೂಲಕ ಉಭಯ ರಾಜ್ಯಗಳ ನಡುವಿನ ದಶಕಗಳ ಹಳೆಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ಅದೇ ರೀತಿ, ಪುಣೆಯಲ್ಲಿ ಕರ್ನಾಟಕದ ಕನಿಷ್ಠ ನಾಲ್ಕು ಬಸ್‌ಗಳನ್ನು ಶಿವಸೇನೆ (ಉದ್ಧವ್ ಬಾಳಾಸಾಬೇಬ್ ಬಣ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕರ್ನಾಟಕ ಸರ್ಕಾರಕ್ಕೆ ತಕ್ಕ ಉತ್ತರ ನೀಡಲು ಮಹಾರಾಷ್ಟ್ರ ಸರ್ಕಾರ ವಿಫಲವಾದಲ್ಲಿ ಸಂಘಟನೆಯ ಕಾರ್ಯಕರ್ತರು ಕರ್ನಾಟಕಕ್ಕೆ ತೆರಳಲಿದ್ದಾರೆ ಎಂದು ಗಾಯ್ಕರ್‌ ಹೇಳಿದರು.

SCROLL FOR NEXT