ದೇಶ

ಜಮ್ಮು ಮತ್ತು ಕಾಶ್ಮೀರ: ನಾಲ್ವರು ಉಗ್ರರ ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ಬಹುಮಾನ, ಪೋಸ್ಟರ್‌ಗಳನ್ನು ಹಾಕಿದ ಎನ್‌ಐಎ

Ramyashree GN

ಶ್ರೀನಗರ: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸಹ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ನಾಲ್ವರು ಉಗ್ರರ ಬಗ್ಗೆ ಮಾಹಿತಿ ಕೋರಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಾಶ್ಮೀರದ ಹಲವು ಭಾಗಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಇಬ್ಬರು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ನಾಲ್ವರು ಉಗ್ರರು ಭಾರತದಲ್ಲಿ ಹಿಂಸಾಚಾರ ನಡೆಸಲು ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ತಮ್ಮ ಭಾಗವಾಗಿಸಿಕೊಳ್ಳುವ, ಪ್ರೇರೇಪಿಸುವ ಮತ್ತು ನೇಮಕಾತಿ ಮಾಡುವ ಸಂಚಿಗೆ ಸಂಬಂಧಿಸಿದಂತೆ ಎನ್‌ಐಎಗೆ ಬೇಕಾಗಿದ್ದಾರೆ.

ತನಿಖಾ ದಳವು ಈಗಾಗಲೇ ನಾಲ್ವರು ಉಗ್ರರನ್ನು ಪತ್ತೆ ಹಚ್ಚಿದವರಿಗೆ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.

ಪೋಸ್ಟರ್‌ಗಳು ಪಾಕಿಸ್ತಾನಿ ಪ್ರಜೆಗಳಾದ ಸಲೀಮ್ ರೆಹಮಾನಿ ಅಲಿಯಾಸ್ 'ಅಬು ಸಾದ್', ಸೈಫುಲ್ಲಾ ಸಾಜಿದ್ ಜಟ್ ಮತ್ತು ಅವರ ಸ್ಥಳೀಯ ಸಹಚರರಾದ ಶ್ರೀನಗರದ ಸಜ್ಜದ್ ಗುಲ್ ಮತ್ತು ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ರೆಡ್ವಾನಿ ಪಯೀನ್‌ನ ಬಸಿತ್ ಅಹ್ಮದ್ ದಾರ್ ಅವರ ಬಗ್ಗೆ ಮಾಹಿತಿ ನೀಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ಮಾಹಿತಿಯನ್ನು ಹಂಚಿಕೊಳ್ಳಲು ಎನ್‌ಐಎ ತನ್ನ ಇಮೇಲ್ ವಿಳಾಸ, ಫೋನ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಸಂಖ್ಯೆಗಳನ್ನು ನೀಡಿದೆ.

ಮಾಹಿತಿ ನೀಡುವವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಜನರಿಗೆ ಭರವಸೆ ನೀಡಿದೆ.

SCROLL FOR NEXT