ದೇಶ

ಮಹಾರಾಷ್ಟ್ರ ಸಚಿವರ ಮೇಲೆ ಮಸಿ ದಾಳಿ: ಭದ್ರತಾ ಲೋಪ ಆರೋಪ ಹಿನ್ನೆಲೆ 10 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

Manjula VN

ಪುಣೆ: ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಅವರ ಮೇಲೆ ಮಸಿ ದಾಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಚ್ವಾಡ್ ಪೊಲೀಸರು 10 ಮಂದಿ ಸಿಬ್ಬಂದಿಗಳನ್ನು ಅಮಾನತುಗೊಳಿಸಿದ್ದಾರೆ.

ಭದ್ರತಾ ಲೋಪ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಏಳು ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ. ಅವರೆಲ್ಲರೂ ಸಚಿವರ ಭೇಟಿಯ ಸಂದರ್ಭದಲ್ಲಿ ಅವರ ಭದ್ರತೆಯಲ್ಲಿದ್ದರು ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಕಮಿಷನರ್ ಅಂಕುಶ್ ಶಿಂಧೆ ಅವರು ಹೇಳಿದ್ದಾರೆ.

ಪಾಟೀಲ್ ಶನಿವಾರ ಸಂಜೆ ಪಿಂಪ್ರಿಯಲ್ಲಿರುವ ಪದಾಧಿಕಾರಿಯೊಬ್ಬರ ಮನೆಯಿಂದ ಹೊರಬರುತ್ತಿದ್ದಾಗ ಮೂವರು ವ್ಯಕ್ತಿಗಳು ಅವರ ಮೇಲೆ ಮಸಿ ದಾಳಿ ನಡೆಸಿದ್ದರು. ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಔರಂಗಾಬಾದ್ ಜಿಲ್ಲೆಯಲ್ಲಿ ಹೇಳಿಕೆ ನೀಡಿದ್ದ ಚಂದ್ರಕಾಂತ್ ಪಾಟೀಲ್ ಅವರು, ‘ಫುಲೆ, ಅಂಬೇಡ್ಕರ್‌ ಹಾಗೂ ಭಾವುರಾಯರು ಅಂದಿನ ಕಾಲದಲ್ಲಿ ಸರ್ಕಾರದ ನೆರವು ಪಡೆಯದೇ ಶಾಲೆ ಆರಂಭಿಸಿದರು. ಶಾಲೆ ಆರಂಭಕ್ಕಾಗಿ ಅವರು ಭಿಕ್ಷೆ ಬೇಡಿದರು. ಆಗ ಜನ ಅವರಿಗೆ 10 ರೂ.. ಕೊಟ್ಟರು. ಇಂದು 10 ಕೋಟಿ ರೂ. ಕೊಡುತ್ತಿದ್ದಾರೆ’ ಎಂದು ಹೇಳಿದ್ದರು. ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬಳಿ ಸ್ಪಷ್ಟನೆ ನೀಡಿ, ‘ಭಿಕ್ಷೆ ಎಂದರೆ ದೇಣಿಗೆ ಎಂದರ್ಥದಲ್ಲಿ ಹೇಳಿದ್ದೆ’ ಎಂದಿದ್ದರು.

SCROLL FOR NEXT