ದೇಶ

ಸಂವಿಧಾನವನ್ನು ಉಳಿಸಲು ಮೋದಿ ಹತ್ಯೆಗೆ ಕರೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

Ramyashree GN

ನವದೆಹಲಿ: ಸಂವಿಧಾನವನ್ನು ಉಳಿಸಲು ಜನರು ಪ್ರಧಾನಿ ನರೇಂದ್ರ ಮೋದಿಯವರನ್ನು 'ಕೊಲ್ಲಲು' ಸಿದ್ಧರಾಗಿರಬೇಕು ಎಂಬ ಮಧ್ಯಪ್ರದೇಶದ ನಾಯಕ ರಾಜಾ ಪಟೇರಿಯಾ ಅವರ ವಿವಾದಾತ್ಮಕ ಹೇಳಿಕೆಗಾಗಿ ಕೇಂದ್ರ ಸಚಿವರು ಸೇರಿದಂತೆ ಬಿಜೆಪಿ ನಾಯಕರು ಮಂಗಳವಾರ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ ಪಟೇರಿಯಾ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ 'ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ. ಕೊಲ್ಲುವುದು ಎನ್ನುವುದರ ಅರ್ಥ ಸೋಲಿಸುವುದು' ಎಂದು ಹೇಳುವುದನ್ನು ಕೇಳಬಹುದು.

ಈ ಕುರಿತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಈ ಹೇಳಿಕೆಗಾಗಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು. ಇದು ವಿರೋಧ ಪಕ್ಷದ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದರು.

ಮತ್ತೋರ್ವ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ, ಸೋನಿಯಾ ಗಾಂಧಿ ಅವರನ್ನು 'ಮೌತ್ ಕಾ ಸೌದಾಗರ್' (ಸಾವಿನ ವ್ಯಾಪಾರಿ) ಎಂದು ಕರೆದರೆ, ಅದರ ಉಸ್ತುವಾರಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚಿನ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು 'ರಾವಣ'ನಿಗೆ ಹೋಲಿಸುವ ಮೂಲಕ ಮೋದಿಯವರನ್ನು ನಿಂದಿಸಿದ ಇತಿಹಾಸ ಕಾಂಗ್ರೆಸ್‌ಗೆ ಇದೆ ಎಂದು ಹೇಳಿದರು.

ಪಟೇರಿಯಾ ಅವರ ಹೇಳಿಕೆಗಳು ಕಾಂಗ್ರೆಸ್ ಆಡಳಿತದಲ್ಲಿ ಪ್ರವರ್ಧಮಾನಕ್ಕೆ ಬಂದ 'ಕೊಲೆಗಳ ರಾಜಕೀಯ'ವನ್ನು ಎತ್ತಿ ತೋರಿಸುತ್ತವೆ. ಕಾಂಗ್ರೆಸ್‌ಗೆ ಜನರು ಹಲವಾರು ಪಾಠಗಳನ್ನು ಕಲಿಸಿದ್ದಾರೆ. ಆದರೆ, ಅದು ಏನನ್ನೂ ಕಲಿತಿಲ್ಲ. ಗುಜರಾತ್ ಚುನಾವಣೆಯ ತೀರ್ಪು ಪಕ್ಷದ ಮುಖಕ್ಕೆ ಕಪಾಳಮೋಕ್ಷವಾಗಿದೆ.

ಮಧ್ಯ ಪ್ರದೇಶದ ಕಾಂಗ್ರೆಸ್ ನಾಯಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ಸಂಸದ ವಿವೇಕ್ ಠಾಕೂರ್ ಅವರು ಪಟೇರಿಯಾ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು ಮತ್ತು 'ಅಧಿಕಾರದ ದುರಾಸೆ ಮತ್ತು ಮೋದಿಯ ಮೇಲಿನ ವೈಮನಸ್ಸಿನ' ಕಾಂಗ್ರೆಸ್‌ನಿಂದ ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಐತಿಹಾಸಿಕ ಜನಾದೇಶದೊಂದಿಗೆ ಚುನಾಯಿತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವ ಅವರ ಕರೆಗಾಗಿ ಪಟೇರಿಯಾ ಅವರನ್ನು ತಕ್ಷಣವೇ ಬಂಧಿಸಬೇಕು ಎಂದರು.

ಮಧ್ಯ ಪ್ರದೇಶದ ಮಾಜಿ ಸಚಿವ ಪಟೇರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲು ಮಧ್ಯಪ್ರದೇಶ ಸರ್ಕಾರ ಆದೇಶಿಸಿದೆ.

SCROLL FOR NEXT