ದೇಶ

ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಹೆಜ್ಜೆಹಾಕಿದ ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

Sumana Upadhyaya

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಇಂದು ಬುಧವಾರ ಬೆಳಗ್ಗೆ ಪ್ರಸ್ತುತ ರಾಜಸ್ಥಾನದ ಮೂಲಕ ಸಾಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo yatra) ಪಾಲ್ಗೊಂಡು ಸುದ್ದಿಯಾಗಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವೀಡಿಯೊದಲ್ಲಿ, ಮಾಜಿ ಆರ್‌ಬಿಐ ಗವರ್ನರ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಮತ್ತು ಸಚಿನ್ ಪೈಲಟ್ ಅವರೊಂದಿಗೆ ಪಕ್ಷದ ಪ್ರಚಾರ ಕಾರ್ಯಕ್ರಮದ ಸಮಯದಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು.

ಆರ್ ಬಿಐ ಮಾಜಿ ಮುಖ್ಯಸ್ಥರಾಗಿರುವ ರಘುರಾಮ್ ರಾಜನ್, 2016ರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನೋಟು ಅಮಾನ್ಯೀಕರಣದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದರು. ಈ ಹಿಂದೆ ಭಾರತದ ಆರ್ಥಿಕ ಬೆಳವಣಿಗೆ ಮತ್ತು ವಿತ್ತೀಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ರಾಜನ್ ತಮ್ಮ ಪುಸ್ತಕ - I do what I do ದಲ್ಲಿ ನೋಟು ಅಮಾನ್ಯೀಕರಣವನ್ನು ಟೀಕಿಸಿದ್ದರು. ಅಲ್ಪಾವಧಿಯ ಆರ್ಥಿಕ ವೆಚ್ಚಗಳು ದೀರ್ಘಾವಧಿಯ ಪ್ರಯೋಜನ ತರುವುದಿಲ್ಲ ಎಂದು ಹೇಳಿದ್ದರು. 

ಇಂದು ಬೆಳಗ್ಗೆ ರಾಜಸ್ಥಾನದ ಸವಾಯಿ ಮಾಧೋಪುರದ ಭಡೋತಿಯಿಂದ ಭಾರತ್ ಜೋಡೋ ಪಾದಯಾತ್ರೆ ಪುನರಾರಂಭವಾಯಿತು. ಕಳೆದ ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಂಚರಿಸಿದೆ. ಇದು ಫೆಬ್ರವರಿ 2023 ರ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ಹಲವಾರು ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಕಾರ್ಯಕರ್ತರು ಮತ್ತು ಮಾಜಿ ಅಧಿಕಾರಿಗಳು ಭಾಗವಹಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯ 100 ದಿನಗಳನ್ನು ಗುರುತಿಸಲು ಕಾಂಗ್ರೆಸ್ ಶುಕ್ರವಾರ ಜೈಪುರದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಗಾಯಕಿ ಸುನಿಧಿ ಚೌಹಾಣ್ ಅವರ ಸಂಗೀತ ಕಾರ್ಯಕ್ರಮವಿರುತ್ತದೆ.

SCROLL FOR NEXT