ದೇಶ

ಇನ್ನು ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುವ ಶಕ್ತಿ ಆಪ್ ಗೆ ಮಾತ್ರ ಇದೆ, ಗುಜರಾತ್ ನಲ್ಲಿ 2027ರಲ್ಲಿ ಆಪ್ ಅಧಿಕಾರಕ್ಕೆ ಬರುತ್ತದೆ: ಅರವಿಂದ್ ಕೇಜ್ರಿವಾಲ್

Sumana Upadhyaya

ನವದೆಹಲಿ: ಆಮ್ ಆದ್ಮಿ ಪಕ್ಷ 2027ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ರಚಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ಇಂದು ದೆಹಲಿಯಲ್ಲಿ ಅವರು ಆಪ್ ರಾಷ್ಟ್ರೀಯ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿ, ಇನ್ನು 10 ವರ್ಷಗಳಲ್ಲಿ ಆಪ್ ಮಾತ್ರ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲು ಸಾಧ್ಯ, ಕೈಗಾರಿಕೋದ್ಯಮಿಗಳು ಮತ್ತು ಆಗರ್ಭ ಶ್ರೀಮಂತರು ದೇಶ ಬಿಟ್ಟು ಹೋಗುತ್ತಿದ್ದಾರೆ. ಅವರಿಗೆ ಬಿಜೆಪಿ ಸರ್ಕಾರ ಕೆಲಸ ಮಾಡುವ ಪೂರಕ ವಾತಾವರಣ ನಿರ್ಮಿಸಿಕೊಡುತ್ತಿಲ್ಲ, ಬಿಜೆಪಿ ಅವರ ಮೇಲೆ ಇಡಿ, ಸಿಬಿಐಯಂತಹ ಸಂಸ್ಥೆಗಳಿಂದ ದಾಳಿ ಮಾಡಿಸಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.

ಭಾರತದ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದರೂ ಚೀನಾ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ಬಿಡುತ್ತಿರುವುದೇಕೆ, ಜನರು ಇನ್ನಾದರೂ ಚೀನಾ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಬೇಕು. ದುಪ್ಪಟ್ಟು ವೆಚ್ಚವಾದರೂ ಭಾರತೀಯ ವಸ್ತುಗಳನ್ನು ನಾವು ಹೆಚ್ಚೆಚ್ಚು ಬಳಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಈ ದೇಶದ ಜನರು ಬಿಜೆಪಿ ಸರ್ಕಾರ ಆಡಳಿತದಡಿಯಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ಹಣದುಬ್ಬರಗಳಿಂದ ಬೇಸತ್ತು ಹೋಗಿದ್ದಾರೆ. ದೆಹಲಿಯಲ್ಲಿ ಆಪ್ ಸರ್ಕಾರ ಹಣದುಬ್ಬರವನ್ನು ತಗ್ಗಿಸಿ ಉದ್ಯೋಗ ಸೃಷ್ಟಿಮಾಡಬಹುದು ಎಂದು ತೋರಿಸಿಕೊಟ್ಟಿದೆ. ಭಾರತದಲ್ಲಿ ದೆಹಲಿಯಲ್ಲಿಯೇ ಹಣದುಬ್ಬರ ಅತ್ಯಂತ ಕಡಿಮೆಯಾಗಿದ್ದು ಶೇಕಡಾ 4.7ರಷ್ಟಿದೆ ಎಂದರು.

ದೇಶದಲ್ಲಿ ಬದಲಾವಣೆ ತಂದು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದೇಶದ ಜನರು ಬಡಿದಾಡದಂತೆ ಮಾಡುವ ಶಕ್ತಿ ಆಪ್ ಗೆ ಮಾತ್ರವಿದೆ ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟರು.

SCROLL FOR NEXT