ದೇಶ

ಭ್ರಷ್ಟಾಚಾರ, ಕೊಳಕು ರಸ್ತೆ, ಮಾಲಿನ್ಯ... ಇವು ಭಾರತದ ವಾಸ್ತವ: ಇನ್ಫೋಸಿಸ್ ನಾರಾಯಣ ಮೂರ್ತಿ

Srinivasamurthy VN

ವಿಜಯನಗರಮ್‌: ‘ಭ್ರಷ್ಟಾಚಾರ, ಕೊಳಕು ರಸ್ತೆಗಳು ಮತ್ತು ಮಾಲಿನ್ಯ ಎಂಬುದು ಭಾರತದಲ್ಲಿ ವಾಸ್ತವ. ಸ್ವಚ್ಛ ರಸ್ತೆ ಮತ್ತು ಮಾಲಿನ್ಯ ರಹಿತತೆ ಎಂಬುದು ಸಿಂಗಾಪುರದಲ್ಲಿ ವಾಸ್ತವ’ ಹೀಗೆಂದು ಇನ್ಫೊಸಿಸ್‌ ಸಂಸ್ಥಾಪಕ ಎನ್‌ ಆರ್‌ ನಾರಾಯಣ ಮೂರ್ತಿ ಹೇಳಿದ್ದಾರೆ.

ಭಾನುವಾರ ಆಂಧ್ರ ಪ್ರದೇಶದ ವಿಜಯನಗಮ್‌ ಜಿಲ್ಲೆಯ ರಾಜಮ್‌ನಲ್ಲಿರುವ ‘ಜಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜಿಎಂಆರ್‌ಐಟಿ)’ಯ ರಜತ ಮಹೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನಾರಾಯಣ ಮೂರ್ತಿ, ‘ಕೊರತೆಯನ್ನು ಬದಲಾವಣೆಗೆ ಅವಕಾಶವನ್ನಾಗಿ ನೋಡಬೇಕು. ನಿಮ್ಮನ್ನು ನೀವು ನಾಯಕನನ್ನಾಗಿ ಕಲ್ಪಿಸಿಕೊಳ್ಳಿ. ಯಾರಿಗೂ ಕಾಯಬೇಡಿ. ಯಾರೋ ಬೇರೆಯವರು ಇದನ್ನು ತೆಗೆದುಕೊಳ್ಳಲಿ ಎಂದು ನಿರೀಕ್ಷಿಸಬೇಡಿ. ನೀವು ಏನು ಮಾಡುತ್ತೀರಿ ಎಂಬುದೇ ವಾಸ್ತವ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಭಾರತದಲ್ಲಿ ವಾಸ್ತವ ಅಂದರೆ... ಭ್ರಷ್ಟಾಚಾರ, ಕೊಳಕು ರಸ್ತೆಗಳು, ಮಾಲಿನ್ಯ ಮತ್ತು ಬಹುತೇಕ ಸಂದರ್ಭದಲ್ಲಿ ವಿದ್ಯುತ್‌ ಇಲ್ಲದೇ ಇರುವುದೇ ಆಗಿದೆ. ಅದೇ ಸಿಂಗಾಪುರದಲ್ಲಿ ವಾಸ್ತವ ಅಂದರೆ, ಸ್ವಚ್ಛ ರಸ್ತೆ, ಮಾಲಿನ್ಯ ರಹಿತತೆ, ನಿರಂತರ ವಿದ್ಯುತ್‌. ಆದ್ದರಿಂದ, ಹೊಸ ವಾಸ್ತವವನ್ನು ಸೃಷ್ಟಿಸುವುದು ನಿಮ್ಮ (ವಿದ್ಯಾರ್ಥಿಗಳ) ಜವಾಬ್ದಾರಿಯಾಗಿದೆ. ಯುವ ಮನಸ್ಸುಗಳು ಸಮಾಜದಲ್ಲಿ ಬದಲಾವಣೆ ತರುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜ ಮತ್ತು ರಾಷ್ಟ್ರದ ಹಿತಾಸಕ್ತಿಗಳನ್ನು ಮೊದಲು ಮಾಡಿಕೊಳ್ಳಬೇಕು ಎಂದು ನಾರಾಯಣ ಮೂರ್ತಿ ಹೇಳಿರುವುದಾಗಿ ಜಿಎಂಆರ್ ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಅಂತೆಯೇ ಜಿಎಂಆರ್ ಗ್ರೂಪ್ ಅಧ್ಯಕ್ಷ ಜಿ ಎಂ ರಾವ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ಅವರಿಂದ ಸ್ಫೂರ್ತಿ ಪಡೆಯಬೇಕು ಮತ್ತು ಸಾಧ್ಯವಾದರೆ ಉದ್ಯಮಿಗಳಾಗಬೇಕು. ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು. ಕಡಿಮೆ ಸವಲತ್ತು ಹೊಂದಿರುವವರಿಗೆ ಸಹಾಯ ಮಾಡಲು ಉದ್ಯೋಗಿಗಳ ಸೃಷ್ಟಿಯೇ ಏಕೈಕ ಪರಿಹಾರವಾಗಿದೆ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು.

ಜಿಎಂಆರ್ ಗ್ರೂಪ್ ಅಧ್ಯಕ್ಷ ಜಿ ಎಂ ರಾವ್ ಮಾತನಾಡಿ, ‘ನಾರಾಯಣ ಮೂರ್ತಿ ಅವರು ಯುವಕರಿಗೆ ಸ್ಫೂರ್ತಿ, ಪ್ರೇರಣೆಯಾಗಿದ್ದಾರೆ. ನೀವು ನನ್ನ ಇಡೀ ತಂಡಕ್ಕೆ, ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸ್ಫೂರ್ತಿ’ ಎಂದು ಕೊಂಡಾಡಿದರು.

GMRIT ಅನ್ನು 1997 ರಲ್ಲಿ ಸ್ಥಾಪಿಸಲಾಯಿತು. GMR ಗ್ರೂಪ್‌ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ವಿಭಾಗ -- GMR ವರಲಕ್ಷ್ಮಿ ಫೌಂಡೇಶನ್ (GMRVF) ನಡೆಸುತ್ತಿರುವ ಸಂಸ್ಥೆಯು ತನ್ನ 25 ನೇ ವರ್ಷದ ವರ್ಷಾಚರಣೆಯನ್ನು ಆಚರಿಸುತ್ತಿದೆ.
 

SCROLL FOR NEXT