ದೇಶ

ದೆಹಲಿ ಮದ್ಯ ಹಗರಣ: ನನ್ನ ವಿರುದ್ಧ ಆರೋಪ 'ಬೋಗಸ್ ಮತ್ತು ಸುಳ್ಳು' ಎಂದ ಕೆಸಿಆರ್ ಪುತ್ರಿ ಕೆ ಕವಿತಾ

Ramyashree GN

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರು ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಗಳು 'ಬೋಗಸ್ ಮತ್ತು ಸುಳ್ಳು' ಎಂದು ಬುಧವಾರ ಹೇಳಿದ್ದಾರೆ.

ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ತಮ್ಮ ವಿರುದ್ಧದ ಆರೋಪಗಳನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) 'ರಾಜಕೀಯ ಸೇಡು' ಎಂದು ಬಣ್ಣಿಸಿದ್ದು, ಸಮಯವೇ ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಹಾಗೂ ತೆಲಂಗಾಣ ಉಸ್ತುವಾರಿ ಮಾಣಿಕಂ ಠಾಗೋರ್ ಮತ್ತು ಬಿಜೆಪಿ ನಾಯಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರ ಟ್ವೀಟ್‌ಗಳಿಗೆ ಪ್ರತಿಕ್ರಿಯೆಯಾಗಿ ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಕವಿತಾ ಈ ಹೇಳಿಕೆ ನೀಡಿದ್ದಾರೆ.

'ನನ್ನ ಮೇಲಿನ ಆರೋಪಗಳು ಸಂಪೂರ್ಣ ಬೋಗಸ್ ಮತ್ತು ಸುಳ್ಳು. ಸಮಯ ಮಾತ್ರ ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸುತ್ತದೆ. ಇದು ಬಿಜೆಪಿಯ ರಾಜಕೀಯ ಸೇಡಿನ ಕ್ರಮವಾಗಿದ್ದು, ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಸಿಎಂ ಕೆಸಿಆರ್ ಜಿ ಅವರು ತಮ್ಮ ರೈತ ವಿರೋಧಿ ಮತ್ತು ಬಂಡವಾಳಶಾಹಿ ಪರ ನೀತಿಗಳನ್ನು ಬಹಿರಂಗಪಡಿಸುತ್ತಾರೆ ಎಂದು ಭಯಪಟ್ಟು ಅವರು ಈ ರೀತಿ ಮಾಡುತ್ತಿದ್ದಾರೆ' ಎಂದು ಕವಿತಾ ಟ್ವೀಟ್ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಕವಿತಾ 100 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ಚಾರ್ಜ್‌ಶೀಟ್‌ನಲ್ಲಿ ಹೇಳಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದರು.

ಇ.ಡಿ ಪ್ರಕಾರ, ಕವಿತಾ, ಅರಬಿಂದೋ ಫಾರ್ಮಾ ನಿರ್ದೇಶಕ ಶರತ್ ಚಂದ್ರ ರೆಡ್ಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಅವರನ್ನೊಳಗೊಂಡ ಸೌತ್ ಗ್ರೂಪ್, ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ವ್ಯವಹಾರದ ಮೇಲೆ ಹಿಡಿತ ಸಾಧಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಗೆ 100 ಕೋಟಿ ರೂ. ಕೊಟ್ಟಿದ್ದರು ಎಂದಿತ್ತು.

ಬಿಜೆಪಿಯ ರಾಜಗೋಪಾಲ್ ರೆಡ್ಡಿ, ಚಾರ್ಜ್‌ಶೀಟ್‌ನಲ್ಲಿ ಲಿಕ್ಕರ್ ಕ್ವೀನ್ ಹೆಸರನ್ನು 28 ಬಾರಿ ಉಲ್ಲೇಖಿಸಲಾಗಿದೆ' ಎಂದು ಬಿಜೆಪಿ ನಾಯಕ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕವಿತಾ, 'ಆತುರಪಡಬೇಡಿ ಎಂದು ಸಲಹೆ ನೀಡಿದ್ದಾರೆ. '28 ಬಾರಿ ಅಲ್ಲ, 28,000 ಬಾರಿ ನನ್ನ ಹೆಸರು ಹೇಳಿದರೂ ಸುಳ್ಳು ಸತ್ಯವಾಗುವುದಿಲ್ಲ ಎಂದು ಕವಿತಾ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಡಿ. 11 ರಂದು ಕೇಂದ್ರ ತನಿಖಾ ದಳ (ಸಿಬಿಐ) ಕವಿತಾ ಅವರನ್ನು ಏಳು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿತ್ತು. ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 160 ರ ಅಡಿಯಲ್ಲಿ ಕೇಂದ್ರೀಯ ಸಂಸ್ಥೆ ಆಕೆಯ ಹೇಳಿಕೆಯನ್ನು ದಾಖಲಿಸಿದೆ.

ನವೆಂಬರ್ 30 ರಂದು, ದೆಹಲಿ ಮದ್ಯ ನೀತಿ ಹಗರಣದಲ್ಲಿ ಉದ್ಯಮಿ ಅಮಿತ್ ಅರೋರಾ ಅವರ ಬಂಧನಕ್ಕಾಗಿ ಇ.ಡಿ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಕವಿತಾ ಹೆಸರು ಕಾಣಿಸಿಕೊಂಡಿತ್ತು. ರಿಮಾಂಡ್ ವರದಿಯ ಪ್ರಕಾರ, ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಉದ್ಯಮಿ ವಿಜಯ್ ನಾಯರ್ ಅವರು ಸೌತ್ ಗ್ರೂಪ್‌ನಿಂದ ಎಎಪಿ ನಾಯಕರ ಪರವಾಗಿ 100 ಕೋಟಿ ರೂ. ಪಡೆದಿದ್ದರು.

SCROLL FOR NEXT