ದೇಶ

ಪಂಜಾಬ್: ಡ್ರಗ್ಸ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

Lingaraj Badiger

ಅಮೃತಸರ: ಪಂಜಾಬ್‌ನ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತದ ಭೂ ಪ್ರದೇಶದಲ್ಲಿ ಡ್ರಗ್ಸ್ ಎಸೆದು ವಾಪಸ್ ಹೋಗುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಪಡೆಗಳು ಹೊಡೆದುರುಳಿಸಿವೆ. ಆದರೆ ಅದು ಪಾಕ್ ಪ್ರದೇಶದಲ್ಲಿ ಬಿದ್ದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ಸಂಜೆ 7:20 ರ ಸುಮಾರಿಗೆ ಗಡಿ ಭದ್ರತಾ ಪಡೆಗಳು ಡ್ರೋನ್ ಅನ್ನು ಹೊಡೆದುರುಳಿಸಿವೆ. ಅದನ್ನು ಪಾಕಿಸ್ತಾನ ರೇಂಜರ್‌ಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಮೃತಸರದ ದಾವೋಕೆ ಗಡಿ ಠಾಣೆ ಬಳಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಆ ಪ್ರದೇಶದಲ್ಲಿ ಶೋಧ ನಡೆಸಿದಾಗ ಭಾರತದ ಗಡಿ ಪೋಸ್ಟ್ ಭರೋಪಾಲ್ ಎದುರು ಪಾಕಿಸ್ತಾನ ಭೂಪ್ರದೇಶದಲ್ಲಿ 20 ಮೀಟರ್ ಒಳಗೆ ಡ್ರೋನ್ ಬಿದ್ದಿರುವುದು ಕಂಡುಬಂದಿದೆ.

ನಂತರ ಸೈನಿಕರು, ಭರೋಪಾಲ್ ಗ್ರಾಮದ ಗಡಿ ಬೇಲಿಯ ಹಿಂದೆ 4.3 ಕೆಜಿ ಶಂಕಿತ ಹೆರಾಯಿನ್ ಹೊಂದಿದ್ದ ಪ್ಯಾಕೆಟ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ. ಈ ಡ್ರಗ್ ಪ್ಯಾಕೆಟ್ ಡ್ರೋನ್ ಮೂಲಕ ತಂದು ಹಾಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT