ದೇಶ

ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಕೋಮುದ್ವೇಷವನ್ನು ಅಸ್ತ್ರವಾಗಿ ಬಳಸುತ್ತದೆ: ರಾಹುಲ್ ಗಾಂಧಿ

Vishwanath S

ನವದೆಹಲಿ: ಚೀನಾದೊಂದಿಗಿನ ಘರ್ಷಣೆ, ಆರ್ಥಿಕ ಕುಸಿತದಂತ ನೈಜ್ಯ ವಿಷಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ದೇಶದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ' ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುತ್ತಿದ್ದಂತೆ ದೆಹಲಿಯ ಕೆಂಪು ಕೋಟೆ ಬಳಿ ಭಾಷಣ ಮಾಡಿದ ರಾಹುಲ್ ಗಾಂಧಿ, ನೈಜ್ಯ ಸಮಸ್ಯೆಗಳನ್ನು ಮುಚ್ಚಿಡಲು 24 ಗಂಟೆಗಳ ಕಾಲ ಹಿಂದೂ-ಮುಸ್ಲಿಂ ನಡುವೆ ದ್ವೇಷ ಹರಡಲಾಗುತ್ತಿದೆ. ಆದರೆ ದೇಶದ ವಾಸ್ತವವು ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಗಮನ ಬೇರೆಡೆ ಸೆಳೆಯಲು ಸರ್ಕಾರ ಇದೆಲ್ಲವನ್ನೂ ಮಾಡುತ್ತಿದೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ಇಮೇಜ್ ಅನ್ನು ನಾಶಮಾಡಲು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ನಾನು ಕೇವಲ ಒಂದು ತಿಂಗಳಲ್ಲಿ ದೇಶಕ್ಕೆ ಸತ್ಯವನ್ನು ತೋರಿಸಿದ್ದೇನೆ ಎಂದರು.

ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು 24x7 ನ್ಯೂಸ್ ಚಾನಲ್ ಗಳ ಮೂಲಕ ಹಿಂದೂ-ಮುಸ್ಲಿಂ ಹೆಸರಿನಲ್ಲಿ ದ್ವೇಷವನ್ನು ಹರಡಲಾಗುತ್ತಿದೆ, ಇದು ಸತ್ಯ ಎಂದು ಒತ್ತಿ ಹೇಳಿದರು. ಇನ್ನು ಇಂದು 108ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆಯಲ್ಲಿ ಇದುವರೆಗೆ ತಮ್ಮ ಮೇಲೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ರಾಹುಲ್ ಗಾಂಧಿ ಜನರಿಗೆ ಧನ್ಯವಾದ ಅರ್ಪಿಸಿದರು. 

ತಾನು ದೇಶಾದ್ಯಂತ ಸಂಚರಿಸಿದ್ದೇನೆ, ಆದರೆ ನಾನು ಎಲ್ಲಿಯೂ ಹಿಂಸಾಚಾರ, ದ್ವೇಷವನ್ನು ನೋಡಿಲ್ಲ, ಆದರೆ ನಾನು ಅದನ್ನು ನ್ಯೂಸ್ ಚಾಲನ್ ಗಳಲ್ಲಿ ನೋಡಿದ್ದೇನೆ. ಸಾವಿರಾರು ಕೋಟಿಗಳನ್ನು ದೊಡ್ಡ ಕೈಗಾರಿಕೋದ್ಯಮಿಗಳಿಗೆ ನೀಡಲಾಗುತ್ತಿದೆ ಆದರೆ ಸಾಮಾನ್ಯ ಜನರಿಗೆ ನೀಡುತ್ತಿಲ್ಲ. ಕೆಲ ನೀತಿಗಳು ಸಣ್ಣ ಉದ್ಯಮಿಗಳು, ವ್ಯಾಪಾರಿಗಳು, ರೈತರನ್ನು ನಾಶಮಾಡುವ ಅಸ್ತ್ರಗಳಾಗುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತ್ ಜೋಡೋ ಯಾತ್ರೆಯು ಭಾರತವನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ. ಬೆಲೆ ಏರಿಕೆ, ನಿರುದ್ಯೋಗ, ಕೋಮು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತದೆ ಎಂದು ಗಾಂಧಿ ಹೇಳಿದರು.

SCROLL FOR NEXT