ದೇಶ

ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ: 'ಸದೈವ್ ಅಟಲ್' ಸ್ಮಾರಕಕ್ಕೆ ರಾಷ್ಟ್ರಪತಿಗಳು, ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

Manjula VN

ನವದೆಹಲಿ: ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ, ಅಜಾತಶತ್ರು ಪ್ರಧಾನಿ ಎಂದೇ ಖ್ಯಾತರಾಗಿದ್ದ ದಿವಂಗತ ಅಟಲ್ ಬಿಹಾರಿ ಅವರ 98ನೇ ಜನ್ಮದಿನ ಅಂಗವಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಮಾಜಿ ಪ್ರಧಾನಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್, ಕೇಂದ್ರ ಸಚಿವ ಅಮಿತ್ ಶಾ, ಸಚಿವೆ ನಿರ್ಮಲಾ ಸೀತಾರಾಮನ್, ಹರ್ದೀಪ್ ಸಿಂಗ್ ಸೇರಿದಂತೆ ಹಲವು ಗಣ್ಯರು ಅಟಲ್ ಸ್ಮಾರಕಕ್ಕೆ ತಮ್ಮ ಗೌರವವನ್ನು ಸಲ್ಲಿಸಿದರು.

ಇದಕ್ಕೂ ಮೊದಲು ಟ್ವೀಟ್ ಮೂಲಕ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಶುಭಾಶಯ ತಿಳಿಸಿದ್ದ ಪ್ರಧಾನಿ ಮೋದಿ, ಭಾರತಕ್ಕೆ ಅವರ ಕೊಡುಗೆ ಅವಿಸ್ಮರಣೀಯ. ಅವರ ನಾಯಕತ್ವ ಮತ್ತು ದೃಷ್ಟಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದರು.

ಇನ್ನು ಅಟಲ್ ಜನ್ಮದಿನದ ಅಂಗವಾಗಿ ಮಾಜಿ ಪ್ರಧಾನಿ ಅವರನ್ನು ಸ್ಮರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದ ರಾಜಕೀಯದ ಪರಾಕಾಷ್ಠೆಯಾದ ಅಟಲ್ ಜೀಯವರ ಜೀವನವು ದೇಶವನ್ನು ಅದರ ಅಂತಿಮ ವೈಭವಕ್ಕೆ ಮರಳಿ ಕೊಂಡೊಯ್ಯಲು ಮುಡಿಪಾಗಿತ್ತು. ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಹೊಸ ಯುಗಕ್ಕೆ ಅಡಿಪಾಯ ಹಾಕುವ ಮೂಲಕ ಅವರು ತಮ್ಮ ನಾಯಕತ್ವದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದರು ಮತ್ತು ಜನರಲ್ಲಿ ರಾಷ್ಟ್ರೀಯ ಹೆಮ್ಮೆಯ ಭಾವನೆಯನ್ನು ತುಂಬಿದರು ಎಂದು ಹೇಳಿದ್ದರು.

ಹೀಗೆ ಅನೇಕ ಗಣ್ಯರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿದ್ದು, ಅವರ ಆಡಳಿತದ ಕುರುಹುಗಳನ್ನು ಮೆಲುಕು ಹಾಕಿದ್ದಾರೆ.

SCROLL FOR NEXT