ದೇಶ

ಹಿಮಾಚಲ ಪ್ರದೇಶ: ಜೈರಾಮ್ ಠಾಕೂರ್ ರನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಘೋಷಿಸಿದ ಬಿಜೆಪಿ

Vishwanath S

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ 14 ದಿನಗಳ ನಂತರ ಇಂದು ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಇನ್ನು ವಿಧಾನಸಭೆಯಲ್ಲಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಶಿಮ್ಲಾದ ವಿಲ್ಲಿಸ್ ಪಾರ್ಕ್‌ನಲ್ಲಿ ನಡೆದ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸತ್ಪಾಲ್ ಸಿಂಗ್ ಸತ್ತಿ, ವಿಪಿನ್ ಸಿಂಗ್ ಪರ್ಮಾರ್, ಜನಕ್ರಾಜ್, ಅನಿಲ್ ಶರ್ಮಾ ಮತ್ತು ಸುಖರಾಮ್ ಚೌಧರಿ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಜೈರಾಮ್ ಠಾಕೂರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ರೀನಾ ಕಶ್ಯಪ್, ಹನ್ಸ್ ರಾಜ್ ಮತ್ತು ಬಲ್ವೀರ್ ವರ್ಮಾ ಅವರ ಹೆಸರನ್ನು ಅನುಮೋದಿಸಿದ್ದಾರೆ.

ಇದಾದ ಬಳಿಕ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಬೇಕೆಂದು ಎಲ್ಲ ಶಾಸಕರು ಒಪ್ಪಿಗೆ ಸೂಚಿಸಿದರು. ಈ ಸಭೆಯಲ್ಲಿ ಎಲ್ಲಾ 24 ಬಿಜೆಪಿ ಶಾಸಕರನ್ನು ಹೊರತುಪಡಿಸಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ವೀಕ್ಷಕರಾಗಿ ಉಪಸ್ಥಿತರಿದ್ದರು. 

ಬಿಜೆಪಿ ರಾಜ್ಯಾಧ್ಯಕ್ಷ ಸುರೇಶ್ ಕಶ್ಯಪ್, ಬಿಜೆಪಿ ಉಸ್ತುವಾರಿ ಅವಿನಾಶ್ ರೈ ಖನ್ನಾ, ಸಹ ಪ್ರಭಾರಿ ಸಂಜಯ್ ಟಂಡನ್, ಮಾಜಿ ಉಸ್ತುವಾರಿ ಮಂಗಲ್ ಪಾಂಡೆ ಕೂಡ ವಿಶೇಷವಾಗಿ ಉಪಸ್ಥಿತರಿದ್ದರು. ಜೈರಾಮ್ ಠಾಕೂರ್ ಅವರು ರಾಜ್ಯ ಸರ್ಕಾರದಲ್ಲಿದ್ದಾಗ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮಂಗಲ್ ಪಾಂಡೆ ಹೇಳಿದರು. ಅವರ ನಾಯಕತ್ವದಲ್ಲಿ ಬಿಜೆಪಿ ಕಾಂಗ್ರೆಸ್ ನ ಋಣಾತ್ಮಕ ಸರ್ಕಾರವನ್ನು ಎದುರಿಸಲಿದೆ.

SCROLL FOR NEXT