ದೇಶ

2022 ರಲ್ಲಿ ಮನೆಗಳ ಮಾರಾಟ ಉತ್ತುಂಗಕ್ಕೆ; 3.65 ಲಕ್ಷ ಯುನಿಟ್ ಮಾರಾಟ- ವರದಿ

Srinivas Rao BV

2022 ರಲ್ಲಿ ದೇಶದ 7 ಟಾಪ್ ನಗರದಲ್ಲಿ ಮನೆಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟ ಆಗಿವೆ. 2014 ರ ನಂತರ ಇದೇ ಮೊದಲ ಬಾರಿಗೆ ದಾಖಲೆಯ ಪ್ರಮಾಣದಲ್ಲಿ ಈ ವರ್ಷ ಮನೆಗಳ ಮಾರಾಟ ನಡೆದಿದೆ ಎನ್ನುತ್ತಿದೆ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಅನಾರಾಕ್. 2022 ರಲ್ಲಿ ಆಸ್ತಿಗಳ ಬೆಲೆ ಹಾಗೂ ಗೃಹ ಸಾಲದ ಬಡ್ಡಿ ಏರಿಕೆಯಾದ ಹೊರತಾಗಿಯೂ ಮನೆಗಳ ಮಾರಾಟ ಏರಿಕೆ ಕಂಡಿದೆ.
 
2021 ರಲ್ಲಿ 7 ನಗರಗಳಲ್ಲಿ 2,36,500 ಮನೆಗಳು ಮಾರಾಟವಾಗಿದ್ದರೆ, 2022 ರಲ್ಲಿ 3,64,900 ಮನೆಗಳು ಮಾರಾಟವಾಗಿತ್ತು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.54 ರಷ್ಟು ಏರಿಕೆಯಾಗಿದೆ. 

2014 ರಲ್ಲಿ 3.43 ಲಕ್ಷ ಯುನಿಟ್ ಗಳು ಮಾರಾಟವಾಗಿತ್ತು ಎನ್ನುತ್ತಿದೆ ಅಂಕಿ- ಅಂಶ  ನಗರಗಳ ವಿಷಯಕ್ಕೆ ಬರುವುದಾದರೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್) ಅತಿ ಹೆಚ್ಚು ಮನೆಗಳ ಮಾರಾಟ ಕಂಡಿದೆ. 2022 ರಲ್ಲಿ ಈ ಪ್ರದೇಶದಲ್ಲಿ 1,09,700 ಮನೆಗಳು ಬಿಕರಿಯಾಗಿದೆ. ನಂತರದ ಸ್ಥಾನದಲ್ಲಿ ಎನ್ ಸಿಆರ್ ಇದ್ದು 63,700 ಯುನಿಟ್ ಗಳು ಮಾರಾಟವಾಗಿದೆ. 

ಇನ್ನು ಹೊಸ ಮನೆಗಳ ನಿರ್ಮಾಣ ಶೇ.51 ರಷ್ಟು ಏರಿಕೆ ಕಂಡಿದೆ. ಎಂಎಂಆರ್ ಹಾಗೂ ಹೈದರಾಬಾದ್ ನಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದ್ದು, ಒಟ್ಟಾರೆ ಈ ವರ್ಷ ಪ್ರಾರಂಭವಾಗಿರುವುದರ ಪೈಕಿ ಶೇ.54 ರಷ್ಟು ಈ ಪ್ರದೇಶಗಳಲ್ಲಿಯೇ ಇವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ 2022 ರಲ್ಲಿ 49,500 ಯುನಿಟ್ ಗಳು ಮಾರಾಟವಾಗಿದ್ದು ಶೇ.50 ರಷ್ಟು ಏರಿಕೆ ದಾಖಲಾಗಿದೆ. ಹೈದರಾಬಾದ್ ನಲ್ಲಿ 2022 ರಲ್ಲಿ 47,500 ಯುನಿಟ್ ಮಾರಾಟವಾಗಿದ್ದು, ಶೇ.87 ರಷ್ಟು ಜಿಗಿತ ಕಂಡಿದೆ.

SCROLL FOR NEXT