ದೇಶ

ಸಮಾಜವು ದ್ವೇಷದಿಂದ ವಿಭಜನೆಯಾಗುತ್ತಿದೆ, ಬೆಲೆ ಏರಿಕೆ-ನಿರುದ್ಯೋಗದಿಂದ ಜನ ತತ್ತರಿಸುತ್ತಿದ್ದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ: ಮಲ್ಲಿಕಾರ್ಜುನ ಖರ್ಗೆ

Sumana Upadhyaya

ನವದೆಹಲಿ: ಇಂದು ಡಿಸೆಂಬರ್ 28, ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ನ 138ನೇ ಸ್ಥಾಪನಾ ದಿನ. ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸಂಸ್ಥಾಪನಾ ದಿನ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಈಗಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಹಿರಿ-ಕಿರಿಯ ನಾಯಕರು, ಪದಾಧಿಕಾರಿಗಳು ಹಾಜರಿದ್ದರು. 

ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾಂಗ್ರೆಸ್‌ನ 138ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತದ ಮೂಲಭೂತ ಅಂಶಗಳ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಸಮಾಜವನ್ನು ದ್ವೇಷದಿಂದ ವಿಭಜಿಸಲಾಗುತ್ತಿದೆ ಎಂದು ಟೀಕಿಸಿದರು.

ಬೆಲೆ ಏರಿಕೆ, ನಿರುದ್ಯೋಗದಿಂದ ದೇಶದ ಜನತೆ ತತ್ತರಿಸಿದ್ದರೂ ಸರಕಾರ ತಲೆಕೆಡಿಸಿಕೊಂಡಿಲ್ಲ. ದೇಶವನ್ನು ಬಿಜೆಪಿ ವಿಭಜಿಸಲು ನೋಡುತ್ತಿದೆ. ಆದರೆ ಕಾಂಗ್ರೆಸ್‌ನ ಒಳಗೊಳ್ಳುವಿಕೆ ಮತ್ತು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಕ್ರಮಗಳಿಂದ ಭಾರತವು ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು.

ಭಾರತವು ಯಶಸ್ವಿ ಮತ್ತು ಬಲಿಷ್ಠ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿದೆ ಮಾತ್ರವಲ್ಲದೆ ಕೆಲವೇ ದಶಕಗಳಲ್ಲಿ ಆರ್ಥಿಕ, ಪರಮಾಣು ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಸೂಪರ್ ಪವರ್ ಆಗಿದೆ. ಕೃಷಿ, ಶಿಕ್ಷಣ, ವೈದ್ಯಕೀಯ, ಐಟಿ-ಬಿಟಿ, ಸೇವಾ ವಲಯಗಳಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದರು. 

ಇವೆಲ್ಲ ತನ್ನಿಂತಾನಾಗಿ ಕೆಲವೇ ವರ್ಷಗಳಲ್ಲಿ ಆಗಿರುವಂಥದ್ದಲ್ಲ. ಇದು ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್‌ನ ನಂಬಿಕೆ ಮತ್ತು ಎಲ್ಲರನ್ನೂ ಕರೆದೊಯ್ಯುವ ನಮ್ಮ ಅಂತರ್ಗತ ಸಿದ್ಧಾಂತದಿಂದಾಗಿ ಮತ್ತು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡುವ ಸಂವಿಧಾನದ ಮೇಲಿನ ನಮ್ಮ ಸಂಪೂರ್ಣ ನಂಬಿಕೆಯಿಂದಾಗಿ ಎಂದು ಹೇಳಿದರು. 

ಭಾರತದ ಮೂಲಭೂತ ಅಂಶಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ, ಸಮಾಜವು ದ್ವೇಷದಿಂದ ವಿಭಜನೆಯಾಗುತ್ತಿದೆ, ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಜನರು ತತ್ತರಿಸುತ್ತಿದ್ದಾರೆ ಆದರೆ ಇವ್ಯಾವ ಸಮಸ್ಯೆಗಳಿಗೂ ಇಂದಿನ ಮೋದಿ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. 

ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಉನ್ನತ ನಾಯಕರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಖರ್ಗೆ ಅವರು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಆರಂಭದಲ್ಲಿ ಪಕ್ಷದ ಧ್ವಜಾರೋಹಣ ಮಾಡಿದರು.

SCROLL FOR NEXT