ಮಹಾ ವಿಧಾನಸಭೆಯಲ್ಲಿ ಲೋಕಾಯುಕ್ತ ಮಸೂದೆ ಅಂಗೀಕಾರ; ಸಿಎಂ, ಸಚಿವರೂ ಒಂಬುಡ್ಸ್‌ಮನ್ ವ್ಯಾಪ್ತಿಗೆ
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬುಧವಾರ ಲೋಕಾಯುಕ್ತ ಮಸೂದೆಯನ್ನು ಅಂಗೀಕರಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಚಿವರನ್ನೂ ಭ್ರಷ್ಟಾಚಾರ ವಿರೋಧಿ ಓಂಬುಡ್ಸ್‌ಮನ್ ವ್ಯಾಪ್ತಿಗೆ ತರಲಾಗಿದೆ.
ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬುಧವಾರ ಲೋಕಾಯುಕ್ತ ಮಸೂದೆಯನ್ನು ಅಂಗೀಕರಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಚಿವರನ್ನೂ ಭ್ರಷ್ಟಾಚಾರ ವಿರೋಧಿ ಓಂಬುಡ್ಸ್‌ಮನ್ ವ್ಯಾಪ್ತಿಗೆ ತರಲಾಗಿದೆ.
ಮಸೂದೆಯ ಪ್ರಕಾರ, ಮುಖ್ಯಮಂತ್ರಿ ವಿರುದ್ಧ ಯಾವುದೇ ತನಿಖೆಯನ್ನು ಪ್ರಾರಂಭಿಸುವ ಮೊದಲು ಲೋಕಾಯುಕ್ತರು ವಿಧಾನಸಭೆಯ ಅನುಮೋದನೆ ಪಡೆಯಬೇಕಾಗುತ್ತದೆ.
ಮಸೂದೆಯ ನಿಬಂಧನೆಗಳ ಪ್ರಕಾರ ಅಂತಹ ಪ್ರಸ್ತಾವನೆಗೆ ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸದಸ್ಯರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರ ಅನುಮೋದನೆ ಅಗತ್ಯವಿರುತ್ತದೆ.
ಇದನ್ನು ಓದಿ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ವಿಧಾನಸಭೆಯಲ್ಲಿ ಸಿಎಂ ಏಕನಾಥ್ ಶಿಂಧೆ ನಿರ್ಣಯ ಮಂಡನೆ, ಸರ್ವಾನುಮತದ ಅಂಗೀಕಾರ
ಮುಖ್ಯಮಂತ್ರಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಒಳಗೊಂಡಿರುವ ಆಂತರಿಕ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಕರಣಗಳನ್ನು ಲೋಕಾಯುಕ್ತ ತನಿಖೆ ನಡೆಸುವುದಿಲ್ಲ ಎಂದೂ ಮಸೂದೆಯಲ್ಲಿ ಹೇಳಲಾಗಿದೆ.
ಅಂತಹ ಯಾವುದೇ ವಿಚಾರಣೆಯನ್ನು ಗೌಪ್ಯವಾಗಿಡಬೇಕು ಮತ್ತು ದೂರನ್ನು ವಜಾಗೊಳಿಸಲು ಅರ್ಹವಾಗಿದೆ ಎಂದು ಲೋಕಾಯುಕ್ತರು ತೀರ್ಮಾನಕ್ಕೆ ಬಂದರೆ, ವಿಚಾರಣೆಯ ದಾಖಲೆಗಳನ್ನು ಪ್ರಕಟಿಸಬಾರದು ಅಥವಾ ಯಾರಿಗೂ ಲಭ್ಯವಾಗಬಾರದು ಎಂದು ಸಹ ಹೇಳಲಾಗಿದೆ.
ಮಸೂದೆಯ ಪ್ರಕಾರ, ಲೋಕಾಯುಕ್ತ ಒಬ್ಬ ಅಧ್ಯಕ್ಷರನ್ನು ಹೊಂದಿರುತ್ತದೆ. ಅವರು ಹೈಕೋರ್ಟ್‌ನ ಪ್ರಸ್ತುತ ಅಥವಾ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿರುತ್ತಾರೆ. ಇದರ ಹೊರತಾಗಿ ಸುಪ್ರೀಂ ಕೋರ್ಟ್ ಅಥವಾ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರು ಇರುತ್ತಾರೆ. ಲೋಕಾಯುಕ್ತದಲ್ಲಿ ಗರಿಷ್ಠ ನಾಲ್ವರು ಸದಸ್ಯರಿದ್ದು, ಅವರಲ್ಲಿ ಇಬ್ಬರು ನ್ಯಾಯಾಂಗದ ಸದಸ್ಯರಾಗಿರುತ್ತಾರೆ.