ದೇಶ

ಒತ್ತಾಯ ಪೂರ್ವಕ ಮತಾಂತರ: ಗುಜರಾತ್ ನಲ್ಲಿ ಸಂತಾ ಕ್ಲಾಸ್ ವೇಷಧಾರಿಗೆ ಬಿತ್ತು ಧರ್ಮದೇಟು! 

Srinivas Rao BV

ಅಹ್ಮದಾಬಾದ್: ಹೊಸ ವರ್ಷಾಚರಣೆ ವೇಳೆಯಲ್ಲಿ ಗುಜರಾತ್ ನಲ್ಲಿ ಸಂತಾ ಕ್ಲಾಸ್ ವೇಷಧಾರಿಯನ್ನು ಸ್ಥಳೀಯರು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

ಅಹ್ಮದಾಬಾದ್ ನಲ್ಲಿ ಹಿಂದೂ ಸಂಘಟನೆಗಳಿಂದ ಈ ಕೃತ್ಯ ನಡೆದಿದ್ದು, ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 

ಕಾನ್ಕಾರಿಯಾ ಕಾರ್ನಿವಲ್ 2022 ಆಯೋಜಿಸಲಾಗಿರುವ ಕಾನ್ಕಾರಿಯಾ ಝೂ ಪ್ರವೇಶ ದ್ವಾರಕ್ಕೆ 
ಶುಕ್ರವಾರದಂದು ರಾತ್ರಿ ತೆರಳಿದ ಬಜರಂಗದಳ ಕಾರ್ಯಕರ್ತರು, ಕಾರ್ಯಕ್ರಮಕ್ಕೆ ಆಗಮಿಸುತ್ತಿರುವವರಿಗೆ ಸಂತಾ ಕ್ಲಾಸ್ ವೇಷಧಾರಿಗಳು ಚಾಕೊಲೇಟ್ ಹಾಗೂ ಧಾರ್ಮಿಕ ಪುಸ್ತಕಗಳನ್ನು ನೀಡಿ ಒತ್ತಾಯಪೂರ್ವಕವಾಗಿ ಮತಾಂತರ ಮಾಡುತ್ತಿದ್ದಾರೆ, ಈ ಬಗ್ಗೆ ತಮಗೆ ದೂರುಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ. 

ಈ ಬಗ್ಗೆ ಗುಜರಾತ್ ನ ಉತ್ತರದ ಬಜರಂಗದಳ ಅಧ್ಯಕ್ಷ ಜವಲಿತ್ ಮೆಹ್ತಾ ಮಾಧ್ಯಮಗಳೊಂದಿಗೆ ಮಾತನಾಡಿದ್ದು, "ಒತ್ತಾಯಪೂರ್ವಕ ಮತಾಂತರವನ್ನು ವಿರೋಧಿಸಿ ಪ್ರತಿಭಟಿಸಲು ಮುಂದಾದಾಗ ಅಲ್ಲಿದ್ದವರ ಪೈಕಿ ಕೆಲವೊಂದು ಮಂದಿಯೊಂದಿಗೆ ಘರ್ಷಣೆ ಉಂಟಾಯಿತು" ಎಂದು ಹೇಳಿದ್ದಾರೆ. 

ಸಾಂತಾ ಕ್ಲಾಸ್ ವೇಷಧಾರಿಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಥಳಿಸುತ್ತಿರುವ ವೀಡಿಯೋಗಳು ವೈರಲ್ ಆಗತೊಡಗಿವೆ. ಸಂತಾ ಕ್ಲಾಸ್ ವೇಷಧಾರಿಗಳಿಗೆ ವಾಪಸ್ ತೆರಳುವಂತೆ ಹಿಂದೂ ಸಂಘಟನೆ ಕಾರ್ಯಕರ್ತರುಗಳು ಆಗ್ರಹಿಸುತ್ತಿರುವುದು ವೀಡಿಯೋದಲ್ಲಿ ವೈರಲ್ ಆಗತೊಡಗಿವೆ. 

SCROLL FOR NEXT