ದೇಶ

ಅಮರಾವತಿ ಔಷಧ ವ್ಯಾಪಾರಿಯ ಹತ್ಯೆ: ಮಾಸ್ಟರ್‌ಮೈಂಡ್‌ ಇರ್ಫಾನ್ ಖಾನ್ ಬಂಧನ

Srinivasamurthy VN

‌ಮುಂಬೈ: ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಮಹಾರಾಷ್ಟ್ರದ ಕೆಮಿಸ್ಟ್ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಇರ್ಫಾನ್ ಖಾನ್ ನನ್ನು ಬಂಧಿಸಿದ್ದಾರೆ.

ಪೂರ್ವ ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ ಅವರ ಹತ್ಯೆಯು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ನಡೆದಿದೆ. ಪ್ರಕರಣದ ಮಾಸ್ಟರ್‌ಮೈಂಡ್‌ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ಇದು 7ನೇ ಬಂಧನವಾಗಿದೆ. 

ಇದನ್ನೂ ಓದಿ: ಕನ್ಹಯ್ಯ ಲಾಲ್ ಹತ್ಯೆ: ಕೋರ್ಟ್ ಆವರಣದಲ್ಲಿ ಆರೋಪಿಗಳ ಮೇಲೆ ಹಲ್ಲೆ; ಜುಲೈ 12 ರವರೆಗೆ 4 ಆರೋಪಿಗಳು ಎನ್ಐಎ ಕಸ್ಟಡಿಗೆ!

ಅಮರಾವತಿ ನಗರ ಅಪರಾಧ ವಿಭಾಗದ ಪೊಲೀಸರು ಸ್ಥಳೀಯ ನಿವಾಸಿ ಇರ್ಫಾನ್ ಖಾನ್ (32) ನನ್ನು ನಾಗ್ಪುರದಲ್ಲಿ ಸಂಜೆ ಬಂಧಿಸಿದ್ದು, ಅಮರಾವತಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ (54) ಅವರನ್ನು ಕೊಲೆ ಮಾಡಲು ಈತ ಸಂಚು ರೂಪಿಸಿದ್ದ ಎಂದು ನಗರ ಪೊಲೀಸ್ ಆಯುಕ್ತ ಡಾ.ಆರತಿ ಸಿಂಗ್ ಹೇಳಿದ್ದಾರೆ. ರಾಷ್ಟ್ರದ ಗಮನ ಸೆಳೆದಿರುವ ಈ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆಯು ಎನ್‌ಐಎ ತನಿಖೆಗೆ ನೀಡಿದೆ.

ಅಮರಾವತಿಯ ಶ್ಯಾಮ್ ಚೌಕ್ ಪ್ರದೇಶದ ಘಂಟಾಘರ್ ಬಳಿ ಜೂನ್ 21 ರಂದು ರಾತ್ರಿ 10.30 ರ ಸುಮಾರಿಗೆ ಕೊಲ್ಹೆ ಅವರನ್ನು ಇರಿದು ಹತ್ಯೆ ಮಾಡಲಾಗಿತ್ತು. ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ, ಕೊಲ್ಹೆ ವಾಟ್ಸಾಪ್ ಗ್ರೂಪ್‌ಗಳಲ್ಲಿ ಪೋಸ್ಟ್‌ ಶೇರ್ ಮಾಡಿದ್ದರು. ಇದಕ್ಕಾಗಿ ಕೊಲೆ ನಡೆದಿರಬಹುದು ಎಂದು ಉಪ ಪೊಲೀಸ್ ಆಯುಕ್ತ ವಿಕ್ರಮ್ ಸಾಲಿ ಸುದ್ದಿಗಾರರಿಗೆ ತಿಳಿಸಿದರು.

ಇದಕ್ಕೂ ಮುನ್ನ ಪೊಲೀಸರು ಮುದಸ್ಸರ್ ಅಹಮದ್ ಅಲಿಯಾಸ್ ಸೋನು ರಜಾ ಶೇಖ್ ಇಬ್ರಾಹಿಂ (22), ಶಾರುಖ್ ಪಠಾಣ್ ಅಲಿಯಾಸ್ ಬಾದಶಾ ಹಿದಾಯತ್ ಖಾನ್ (25), ಅಬ್ದುಲ್ ತೌಫಿಕ್ ಅಲಿಯಾಸ್ ನಾನು ಶೇಖ್ ತಸ್ಲೀಂ (24), ಶೋಬ್ ಖಾನ್ ಅಲಿಯಾಸ್ ಭೂರ್ಯ ಸಬೀರ್ ಖಾನ್ (22), ಅತೀಬ್ ರಶೀದ್ ಆದಿಲ್ ರಶೀದ್ (22) ಮತ್ತು ಯೂಸುಫ್ ಖಾನ್ ಬಹದ್ದೂರ್ ಖಾನ್ (44) ಎಂಬುವವರನ್ನು ಬಂಧಿಸಿದ್ದರು. ಹತ್ಯೆಗೂ ಮೂರು ದಿನಗಳ ಮೊದಲು ಆರೋಪಿಗಳು ಕೊಲ್ಹೆಯವರ ಚಲನವಲನಗಳನ್ನು ಗಮನಿಸಿದ್ದರು ಎಂದು ಸಾಲಿ ಹೇಳಿದ್ದಾರೆ. ಹತ್ಯೆಯ ಮಾಸ್ಟರ್‌ಮೈಂಡ್‌ ಇರ್ಫಾನ್ ಖಾನ್ ನನ್ನೂ ಬಂಧಿಸಲಾಗಿದೆ. 

SCROLL FOR NEXT