ದೇಶ

ದೆಹಲಿ ಶಾಸಕರ ವೇತನ ಶೇ.66 ರಷ್ಟು ಹೆಚ್ಚಳ, ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

Lingaraj Badiger

ನವದೆಹಲಿ: ದೇಶದಲ್ಲಿ ಅತ್ಯಂತ ಕಡಿಮೆ ಸಂಭಾವನೆ ಪಡೆಯುವ ಶಾಸಕರಲ್ಲಿ ಒಬ್ಬರಾಗಿದ್ದ ದೆಹಲಿ ಶಾಸಕರ ವೇತನ ಮತ್ತು ಭತ್ಯೆಗಳನ್ನು ಶೇಕಡಾ 66 ರಷ್ಟು ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಮಸೂದೆಗಳನ್ನು ದೆಹಲಿ ವಿಧಾನಸಭೆಯಲ್ಲಿ ಸೋಮವಾರ ಅಂಗೀಕರಿಸಿದೆ.

ಸಚಿವರು, ಶಾಸಕರು, ಮುಖ್ಯ ಸಚೇತಕ, ಸ್ಪೀಕರ್ ಮತ್ತು ಉಪಸಭಾಪತಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರ ವೇತನ ಹೆಚ್ಚಳಕ್ಕಾಗಿ ಐದು ವಿಭಿನ್ನ ಮಸೂದೆಗಳನ್ನು ಇಂದು ಮಂಡಿಸಲಾಯಿತು. ಬಳಿಕ ಅವುಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಬೆಲೆ ಏರಿಕೆ ಹಾಗೂ ಶಾಸಕರು ಮಾಡಿರುವ ಕೆಲಸಗಳಿಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡಬೇಕು ಎಂದು ಎಲ್ಲಾ ಸದಸ್ಯರು ಒತ್ತಾಯಿಸಿದರು.

ಹಣಕಾಸು ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ, "ಪ್ರತಿಭಾವಂತರನ್ನು ರಾಜಕೀಯಕ್ಕೆ ಆಹ್ವಾನಿಸಲು, ಪ್ರತಿಫಲ ಇರಬೇಕು. ಕಾರ್ಪೊರೇಟ್‌ ಕಂಪನಿಗಳು ಸಂಬಳದ ಕಾರಣದಿಂದ ಪ್ರತಿಭಾವಂತ ಜನರನ್ನು ಪಡೆಯುತ್ತವೆ" ಎಂದು ಹೇಳಿದರು.

ಬಿಜೆಪಿ ಶಾಸಕ ಮತ್ತು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮವೀರ್ ಸಿಂಗ್ ಬಿಧುರಿ ಅವರು ಸಹ ವೇತನ ಹೆಚ್ಚಳವನ್ನು ಬೆಂಬಲಿಸಿದರು.

SCROLL FOR NEXT