ದೇಶ

ಪ್ರತಿಯೊಬ್ಬ ಭಾರತೀಯನ ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಎನ್ ಡಿಎ ಸರ್ಕಾರ ಪ್ರಯತ್ನಿಸುತ್ತಿದೆ: ಪ್ರಧಾನಿ ಮೋದಿ

Sumana Upadhyaya

ಹೈದರಾಬಾದ್: ಕೇಂದ್ರದ ಎನ್‌ಡಿಎ ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಮತ್ತು ಜನರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹೈದರಾಬಾದ್ ನ ಪರೇಡ್ ಮೈದಾನದಲ್ಲಿ ‘ವಿಜಯ್ ಸಂಕಲ್ಪ ಸಭೆ’ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ಜನತೆ ಡಬಲ್ ಎಂಜಿನ್ ಬೆಳವಣಿಗೆಗಾಗಿ ಹಾತೊರೆಯುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅದನ್ನು ಈಡೇರಿಸಲಾಗುವುದು ಎಂದು ನೆರೆದಿದ್ದ ಜನತೆಯ ಮುಂದೆ ಆಶ್ವಾಸನೆ ನೀಡಿದರು. ತೆಲಂಗಾಣದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ.

ಡಬಲ್ ಇಂಜಿನ್' ಸರ್ಕಾರ ಅಥವಾ ಬೆಳವಣಿಗೆಯು ಕೇಂದ್ರದ ಎನ್‌ಡಿಎ ಸರ್ಕಾರದ ನೆರವಿನೊಂದಿಗೆ ಬಿಜೆಪಿ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಮೋದಿ ಮತ್ತು ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಹೇಳುವ ಪದವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ನಾವು ಪ್ರತಿಯೊಬ್ಬ ಭಾರತೀಯನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದೇವೆ. ಜನರ ಜೀವನವನ್ನು ಹೇಗೆ ಸುಲಭಗೊಳಿಸುವುದು ಮತ್ತು ಅಭಿವೃದ್ಧಿಯ ಫಲವನ್ನು ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರದೇಶಕ್ಕೆ ಹೇಗೆ ಕೊಂಡೊಯ್ಯುವುದು ಎಂಬುದರ ಕುರಿತು ನಾವು ದಣಿವರಿಯದೆ ಕೆಲಸ ಮಾಡುತ್ತಿದ್ದೇವೆ ಎಂದರು. 

2014 ರಿಂದ ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಆಡಳಿತ ನಡೆಸುತ್ತಿರುವ ದಕ್ಷಿಣ ರಾಜ್ಯವಾದ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯ ವೇಗವು ಇನ್ನೂ ಹೆಚ್ಚಾಗಲಿದೆ ಎಂದರು. 

ತೆಲಂಗಾಣ ಜನತೆಯ ಮೇಲೆ ಬಿಜೆಪಿ ಪಕ್ಷದ ಇಟ್ಟಿರುವ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು ಜುಲೈ 2 ಮತ್ತು 3 ರಂದು ಬಿಜೆಪಿ ತನ್ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಇಲ್ಲಿ ನಡೆಸಿದೆ ಎಂದು ಕೂಡ ಸಭೆಯಲ್ಲಿ ಮೋದಿ ಹೇಳಿದರು.

SCROLL FOR NEXT