ದೇಶ

ಅಮರನಾಥ ಗುಹೆ ಬಳಿ ಮೇಘಸ್ಫೋಟ, ಕನಿಷ್ಠ 10 ಸಾವು, ಹಲವರ ನಾಪತ್ತೆ; NDRF ದೌಡು, ಸಮರೋಪಾದಿ ರಕ್ಷಣೆ!

Srinivasamurthy VN

ಶ್ರೀನಗರ: ಖ್ಯಾತ ಪವಿತ್ರ ಯಾತ್ರಾತಾಣ ಅಮರನಾಥ ಗುಹೆ ಬಳಿ ಮೇಘ ಸ್ಫೋಟ ಸಂಭವಿಸಿದ್ದು, ಘಟನೆಯನ್ನಿ ಕನಿಷ್ಟ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಅಮರನಾಥದ ಪವಿತ್ರ ಗುಹೆಯ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದ್ದು, ಈ ವೇಳೆ ದಿಢೀರ್ ಉಂಟಾದ ಪ್ರವಾಹಕ್ಕೆ ಸಿಲುಕಿ 3 ಮಹಿಳೆಯರು, ಇಬ್ಬರು ಪುರುಷರು ಸೇರಿ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಅನೇಕರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಶುಕ್ರವಾರ ಸಂಜೆ 5:30ರ ಸುಮಾರಿನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಈ ವೇಳೆ ದಿಢೀರ್ ಉಂಟಾದ ಪ್ರವಾಹದಲ್ಲಿ ಜನರು ಸಿಲುಕಿದ್ದಾರೆ. ಯಾತ್ರೆ ಮಾರ್ಗದಲ್ಲಿರುವ ಸಮುದಾಯ ಅಡುಗೆ ಕೋಣೆಗಳು ಮತ್ತು ಟೆಂಟ್‌ಗಳು ಕೊಚ್ಚಿ ಹೋಗಿವೆ. 

ಸೇನಾ ಮೂಲಗಳ ಪ್ರಕಾರ ಮೇಘಸ್ಫೋಟ ಮತ್ತು ಅದರ ಬಳಿಕದ ಪ್ರವಾಹದಿಂದಾಗಿ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಅಂತೆಯೇ ಪ್ರವಾಹದ ನೀರು ನೇರವಾಗಿ ಯಾತ್ರಿಕರು ತಂಗಿದ್ದ ಟೆಂಟ್ ಗಳತ್ತ ನುಗ್ಗಿದ್ದು ಇದು ಸಾವು-ನೋವಿನ ಪ್ರಮಾಣ ಹೆಚ್ಚಿಸುವ ಅತಂಕ ಎದುರಾಗಿದೆ. ಪ್ರಸ್ತುತ ಗಾಯಾಳುಗಳನ್ನು ಚಿಕಿತ್ಸೆಗಾಗಿ ಏರ್ ಲಿಫ್ಟ್ ಮಾಡಲಾಗುತ್ತಿದ್ದು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ಇತರ ಏಜೆನ್ಸಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. 

ಪ್ರವಾಹ ಮತ್ತು ಮೇಘಸ್ಫೋಟದ ಹೊರತಾಗಿಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು  2 ವರ್ಷಗಳ ಕೋವಿಡ್ ಅಂತರದ ನಂತರ ಈ ವರ್ಷ ಜೂನ್ 30 ರಂದು ತೀರ್ಥಯಾತ್ರೆ ಪ್ರಾರಂಭವಾಗಿತ್ತು. ಈ ಹಿಂದೆ  ಪ್ರತಿಕೂಲ ಹವಾಮಾನದ ಕಾರಣ ಅಮರನಾಥ ಯಾತ್ರೆಯನ್ನು ಈ ವಾರದ ಆರಂಭದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ 72,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ದೇಗುಲದಲ್ಲಿ ತಮ್ಮ ಪೂಜೆ ಸಲ್ಲಿಸಿದ್ದಾರೆ. ಯಾತ್ರೆಯು ಆಗಸ್ಟ್ 11 ರಂದು ಕೊನೆಗೊಳ್ಳಲ್ಲಿದೆ.
 

SCROLL FOR NEXT