ದೇಶ

ಶಿವಸೇನೆಯ 'ಬಿಲ್ಲು- ಬಾಣ' ಚಿಹ್ನೆಯನ್ನು ಯಾರೂ ಕಸಿಯಲು ಸಾಧ್ಯವಿಲ್ಲ: ಉದ್ಧವ್ ಠಾಕ್ರೆ

Nagaraja AB

ಮುಂಬೈ: ಕೆಲವು ಮಾಧ್ಯಮ ವಲಯಗಳಲ್ಲಿನ ಊಹಾಪೋಹಗಳನ್ನು ತಳ್ಳಿಹಾಕಿರುವ ಶಿವಸೇನಾ ಅಧ್ಯಕ್ಷ, ಉದ್ಧವ್ ಠಾಕ್ರೆ, ಪಕ್ಷದ ಐಕಾನಿಕ್ 'ಬಿಲ್ಲು ಮತ್ತು ಬಾಣ' ಚುನಾವಣಾ ಚಿಹ್ನೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಶುಕ್ರವಾರ ಪ್ರತಿಪಾದಿಸಿದ್ದಾರೆ.

ತಮ್ಮ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಪತನ ಕುರಿತು  ಜನರು ನಿಲುವು ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದ ಅವರು, ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಗೆ ಒತ್ತಾಯಿಸಿದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಗ್ರೂಪ್ ಮತ್ತು ಕೊಲವೊಂದು ಮಾಧ್ಯಮ ಸುದ್ದಿಯನ್ನು ಉಲ್ಲೇಖಿಸಿದ ಅವರು, ಶಿವಸೇನೆಗೆ ಸೇರಿದ ಯಾವುದನ್ನು ಯಾರೂ ಕದಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಗೊಂದಲವನ್ನು ಹರಡಲು ಯತ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಶಾಸಕಾಂಗ ಪಕ್ಷಕ್ಕೂ ನೋಂದಾಯಿತ ರಾಜಕೀಯ ಪಕ್ಷಕ್ಕೂ ವ್ಯತ್ಯಾಸವಿದೆ. ಎಷ್ಟೇ ಶಾಸಕರು ಹೋದರೂ ಪಕ್ಷ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ. ಜನರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. 

ಉನ್ನತ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು, ಬಿಲ್ಲು ಮತ್ತು ಬಾಣ ಚಿಹ್ನೆ ಶಿವಸೇನೆಗೆ ಸೇರಿದ್ದು ಅದು ನಮ್ಮಲ್ಲಿಯೇ ಉಳಿಯುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ ಉದ್ಧವ್ ಠಾಕ್ರೆ, ಎಲ್ಲಾ ರೀತಿಯ ಬೆದರಿಕೆ ನಡುವೆಯೂ 16 ಶಾಸಕರು ನಮ್ಮೊಂದಿಗೆಯೇ ಉಳಿದಿದ್ದು, ಸತ್ಯಮೇವ ಜಯತೇ ಎಂಬುದರಲ್ಲಿ ನಂಬಿಕೆ ಹೊಂದಿದ್ದಾರೆ. ಜುಲೈ 11 ರಂದು ಸುಪ್ರೀಂ ಕೋರ್ಟ್ ತೀರ್ಪು ಈ ದೇಶದಲ್ಲಿ ಪ್ರಜಾಪ್ರಭುತ್ವವು ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದರ ಸೂಚನೆಯನ್ನು ನೀಡುತ್ತದೆ ಎಂದು ಠಾಕ್ರೆ ಹೇಳಿದರು.  

ಸಂವಿಧಾನವನ್ನು ಎತ್ತಿಹಿಡಿಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದರಿಂದ ಈ ನಿರ್ಧಾರವು ಬಹಳ ಮಹತ್ವದ್ದಾಗಿದೆ. ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದು ಅವರು ಘೋಷಿಸಿದರು. ಕಾರ್ಪೊರೇಟರ್‌ಗಳು ಹೋಗಿರಬಹುದು, ಆದರೆ ಮುನ್ಸಿಪಲ್ ಕಾರ್ಪೊರೇಷನ್‌ಗಳು ಇನ್ನೂ ಇವೆ, ಜನರು ಶಿವಸೇನೆಯೊಂದಿಗೆ ಇರುವವರೆಗೂ ಯಾವುದೇ ಅಪಾಯವಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದರು.

SCROLL FOR NEXT